ಬೆಂಗಳೂರು:-ನಾನು ಯಾವತ್ತು ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಇಡೀ ದೇಶದಲ್ಲಿ ಯುವಕರಿಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ ನಿಜ. ಈಗ ಆ ಹಿನ್ನಡೆಯ ಕಾರಣದ ಬಗ್ಗೆ ಚರ್ಚೆ ಬೇಡ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಪಕ್ಷದ ವರಿಷ್ಠರು, ನಾಯಕರೊಂದಿಗೆ ಚರ್ಚಿಸಿ, ಅವರ ಸಲಹೆ ಮೇರೆಗೆ ಕೆಲಸ ಮಾಡಲಾಗುವುದು ಎಂದರು. ಇಡೀ ದೇಶದ ಜನತೆ ಪ್ರಧಾನಿ ಮೋದಿ ಕಡೆಗೆ ನೋಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ನಮ್ಮ ಪಕ್ಷ ಜಯಭೇರಿ ಭಾರಿಸುವ ವಿಶ್ವಾಸ ತಮಗಿದೆ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಣೆಯಾದ ತಕ್ಷಣವೇ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಟ್ಟಿದ್ದೇನೆ. ಇದರೊಂದಿಗೆ ಎಲ್ಲರ ಪ್ರೀತಿ ಉಳಿಸಿಕೊಳ್ಳಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಅವರು ರಾಜ್ಯದ ಜನತೆಯಿಂದ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಕಡಿಮೆ ಅವಧಿಯಲ್ಲಿಯೇ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ 6 ತಿಂಗಳು ಕಳೆದ ಬಳಿಕ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಬೇಕು ಎಂದುಕೊಂಡಿದ್ದೇವು. ಆದರೆ ಈ ಸರ್ಕಾರ ನಾವು ಅಂದುಕೊಂಡಿದ್ದಕ್ಕಿಂತ ಮುಂಚಿತವೇ ಜನರ ವಿಶ್ವಾಸದಿಂದ ದೂರವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಭೀಕರ ಪರಿಸ್ಥಿತಿಯಿದೆ. ಆದರೂ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಇದನ್ನು ಗಮನಿಸಿದರೆ ಇವರಿಗೆ ರಾಜ್ಯದ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ ಎಂಬುದು ಗೊತ್ತಾಗುತ್ತಿದೆ ಎಂದು ಲೇವಡಿ ಮಾಡಿದರು.
ನಾನು ರಾಜ್ಯಾಧ್ಯಕ್ಷನಾಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಷ್ಟು ದೊಡ್ಡ ಜವಾಬ್ದಾರಿ ಕೊಡುತ್ತಾರೆ ಎಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.