ಮೈಸೂರು: “ವೈರಲ್ ಆಗಿರುವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವೀಡಿಯೋವನ್ನು ನಾನು ನೋಡೂ ಇಲ್ಲ.. ಕೇಳೂ ಇಲ್ಲ.. ಆ ಬಗ್ಗೆ ನನಗೆ ಗೊತ್ತೇ ಇಲ್ಲ” ಎಂದು ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಹಾರಿಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು,
ವರ್ಗಾವಣೆ ಮಾಡೋದು ಮುಖ್ಯಮಂತ್ರಿ ಅವರ ಪರಮಾಧಿಕಾರ ಆಗಿದೆ ಎಂದು ಒಂದೇ ಹೇಳಿಕೆಯನ್ನು ಬರೋಬ್ಬರಿ ಆರು ಬಾರಿ ಪುನರುಚ್ಛರಿಸಿದ್ದಾರೆ. ಯಾರು ಏನೇ ಹೇಳಬಹುದು.. ಆದರೆ ವರ್ಗಾವಣೆ ವಿಚಾರದಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡಲು ಅವಕಾಶವಿರಲ್ಲ. ಆ ರೀತಿ ಪ್ರಕರಣ ನಡೆದಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ ಎಂದು ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ಸಚಿವ ಮಹದೇವಪ್ಪ ಕಿಡಿಕಾರಿದರು. ಪ್ರಚಾರಕ್ಕಾಗಿ ಅಧಿಕಾರಿಗಳ ನಿಯೋಜನೆ ಮಾಡಲಾಗುತ್ತಿದೆ. 250- 300 ಅಧಿಕಾರಿಗಳ ದುರ್ಬಳಕೆ ಆಗಿದೆ. ಮೈಸೂರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ ಇತ್ತು. ರಾಜ್ಯಪಾಲರು, ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.
ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಮುಖ್ಯಮಂತ್ರಿ ಕಚೇರಿಗೂ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾದ ನನಗೂ ಮಾಹಿತಿ ಇಲ್ಲ.ಗಣತಂತ್ರ ವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ. ಆಡಳಿತ ವೈಫಲ್ಯಗಳನ್ನು ಮರೆ ಮಾಚಲಾಗಿದೆ. ಅಖಿಲ ಭಾರತ ಸೇವೆಯ ಅಧಿಕಾರಿಗಳು ಹಿತಾಸಕ್ತಿಯ ಪರವಾಗಿ ಕೆಲಸ ಮಾಡಬಾರದು ಅಂತ ಮಹದೇವಪ್ಪ ತಿಳಿಸಿದರು.