ನಟ ಅಲ್ಲು ಅರ್ಜುನ್ ಅವರನ್ನು ಇಂದು ಬೆಳಗ್ಗೆಯೇ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಪುಷ್ಪ 2 ಯಶಸ್ಸಿನ ಖುಷಿಯಲ್ಲಿದ್ದ ಅಲ್ಲು ಅರ್ಜುನ್ ಗೆ ಇದು ಶಾಕ್ ನೀಡಿದೆ. ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯದ ಕೈವಾಡ ಇರಬಹುದು ಎಂಬ ಗುಮಾನಿ ಅನೇಕರಿಗೆ ಮೂಡಿತ್ತು. ಈ ವಿಚಾರದಲ್ಲಿ ಅನೇಕರು ತೆಲಂಗಾಣ ಸಿಎಂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ದೂರಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ರೇವಂತ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಅಲ್ಲು ಅರ್ಜುನ್ ಸಿನಿಮಾ ನೋಡಲು ತೆರಳಿದ್ದರಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರು ಮತ್ತು ಇದು ಕಾಲ್ತುಳಿತಕ್ಕೆ ಕಾರಣ ಆಯಿತು ಎಂಬುದು ಸದ್ಯ ಇರುವ ಆರೋಪ. ಸದ್ಯ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಿಸಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಸಲು ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ಬಂಧನದ ಬಗ್ಗೆ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ‘ಅಲ್ಲು ಅರ್ಜುನ್ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರ ಬಂಧನದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನು ಪ್ರಕ್ರಿಯೆ ನಡೆಸಲಾಗುವುದು’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಅಲ್ಲು ಅರ್ಜುನ್ ಬಂಧನದ ನಂತರ, ಚಿರಂಜೀವಿ ದಂಪತಿಗಳು ಮತ್ತು ನಾಗಬಾಬು ಅಲ್ಲು ಅರ್ಜುನ್ ನಿವಾಸವನ್ನು ತಲುಪಿದ್ದಾರೆ. ಈ ಘಟನೆಯಿಂದ ಶಾಕ್ ಆಗಿರೋ ಚಿರಂಜೀವಿ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಅಲ್ಲು ಅರ್ಜುನ್ ಮನೆಗೆ ಆಗಮಿಸಿದ್ದಾರೆ. ಅಲ್ಲು ಅರ್ಜುನ್ ಅವರ ಬಂಧನದ ಬಳಿಕ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿದೆ. ನೆಚ್ಚಿನ ನಟ ಯಾವಾಗ ಹೊರಕ್ಕೆ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಒಂದೊಮ್ಮೆ ಇವತ್ತು ಜಾಮೀನು ಸಿಗದೆ ಇದ್ದರೆ ಸೋಮವಾರದವರೆಗೆ ಅಲ್ಲು ಅರ್ಜುನ್ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.