ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿ, ದಿನ ಮತ್ತು ಸ್ಥಳವನ್ನು ನಿಗದಿಪಡಿಸಿದರೆ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಮತ್ತು ಕನ್ನಡಿಗರಿಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳುತ್ತಲೇ ಬಂದಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾಗಿರುವವರು ಪ್ರಧಾನಿ ನರೇಂದ್ರ ಮೋದಿಯವರೇ ಹೊರತು ಬಿಜೆಪಿಯ ಐಟಿ ಸೆಲ್ ಅಲ್ಲ ಎಂದು ಕುಟುಕಿದ್ದಾರೆ.
ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂ. ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಮೋದಿಯವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಛೇಡಿಸಿದ್ದಾರೆ.
ಮೋದಿ ಪ್ರತಿಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸಲಿ?
ಕೆಲವು ಅಂಶಗಳನ್ನು ಪಟ್ಟಿಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ತೆರೆದ ಪುಸ್ತಕದಲ್ಲಿ ಕಾಣುವ ಅನ್ಯಾಯಗಳನ್ನು ಕಂಡು ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸಲಿ? ಉದ್ದೇಶಪೂರ್ವಕವಾದ ನಿರ್ಲಕ್ಷ್ಯ ಎನ್ನಲೇ? ಸಹಜವಾದ ನಿದ್ರಾ ಸ್ಥಿತಿ ಎನ್ನಲೇ? ಎಂದು ಪ್ರಶ್ನೆ ಮಾಡಿದ್ದಾರೆ.