ಶಿವಮೊಗ್ಗ:– ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗದಿರಲು ನಾನು ಕಾರಣ ಅಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸವಿದೆ. ನನ್ನ ಅವಶ್ಯಕತೆ ಎಲ್ಲಿದೆ ಆ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.
ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ. ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಟಿಕೆಟ್ ನಿರ್ಧಾರ ಮಾಡಿದೆ. ಈಶ್ವರಪ್ಪ ಪಕ್ಷ ಕಟ್ಟಿ ಬೆಳೆಸಿದವರು, ಮನಸ್ಸಿಗೆ ನೋವಾಗಿರಬಹುದು. ರಾಜ್ಯ ನಾಯಕರು ಈಶ್ವರಪ್ಪ ಜತೆ ಮಾತಾಡುವ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ಕಾರ್ಯಕ್ರಮಕ್ಕೆ ಬಂದು ಕೆ.ಎಸ್.ಈಶ್ವರಪ್ಪ ಮಾತನಾಡುವ ವಿಶ್ವಾಸ ಇದೆ. ಅವರನ್ನು ಮತ್ತೆ ಕರೆತರುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಆದ ನೋವಿನಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂದಿದ್ದಾರೆ. ಟಿಕೆಟ್ ವಿಚಾರದಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕಲಬುರಗಿಯಲ್ಲಿ ನಡೆದ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಕೂತಲ್ಲೂ ನಿಂತಲ್ಲೂ ಬಿಜೆಪಿ ಪರ ಒಳ್ಳೆಯ ಅಭಿಪ್ರಾಯ ಸಿಗುತ್ತಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೋಪದಲ್ಲಿ ಮಾತನಾಡಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಕೂಡ ಬರುತ್ತಾರೆ. ಬಿಜೆಪಿ ಕಟ್ಟಲು ಕೆ.ಎಸ್.ಈಶ್ವರಪ್ಪ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲವೂ ಸರಿ ಹೋಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.