ಬೆಂಗಳೂರು:- ಕೆಲಸ ಇಲ್ಲದೇ ಖಾಲಿ ಕೂತರೂ ವಿಚ್ಚೇದನ ಪತ್ನಿಗೆ ಪತಿ ಜೀವನಾಂಶ ಕೊಡಲೇಬೇಕು ಎಂದು ಹೈಕೋರ್ಟ್ ಹೇಳಿದೆ.
ಜೀವನ ಪೂರ್ತಿ ಒಟ್ಟಿಗೆ ಬಾಳ್ವೆ ಮಾಡುವುದಾಗಿ ಮದುವೆಯಾಗಿ ಈಗ ಪತ್ನಿಯೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲವೆಂದು ವಿಚ್ಛೇದನ ಪಡೆಯುವ ಪತಿರಾಯ, ತನಗೆ ದುಡಿಮೆಯಿಲ್ಲವೆಂದು ಅಥವಾ ಕೆಲಸವಿಲ್ಲವೆಂದು ಜೀವನಾಂಶ ಕೊಡುವುದನ್ನು ನಿರಾಕರಣೆ ಮಾಡುವಂತಿಲ್ಲ. ಹೀಗಾಗಿ, ವಿಚ್ಛೇದಿತ ಪತ್ನಿಗೆ ನೀವು ಹೇಗಾದರೂ ಮಾಡಿ ಜೀವನಾಂಶವನ್ನು ಕೊಡಲೇಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಕಳೆದ 2020ರಲ್ಲಿ ವಿವಾಹ ಆಗಿದ್ದ ದಂಪತಿಯ ದಾಂಪತ್ಯ ಕೆಲವೇ ತಿಂಗಳಲ್ಲಿ ಮುರಿದುಬಿದ್ದಿತ್ತು. ಇದರಿಂದಾಗಿ ಪರಸ್ಪರ ಒಪ್ಫಿಗೆ ಮೇರೆಗೆ ದಂಪತಿ ವಿಚ್ಛೇದನ ಪಡೆದಿದ್ದರು. ಈ ವೇಳೆ ಕುಟುಂಬ ನ್ಯಾಯಾಲಯದಲ್ಲಿ ದಂಪತಿ ಪರಸ್ಪರ ಒಪ್ಪಿದ್ದರಿಂದ ವಿಚ್ಚೇದನವನ್ನು ಊರ್ಜಿತ ಮಾಡಿತ್ತು. ಜೊತೆಗೆ, ಗೃಹಿಣಿಯಾಗಿದ್ದ ಪತ್ನಿಗೆ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಇದಾದ ನಂತರ ಕೆಲವು ತಿಂಗಳ ಕಾಲ ಜೀವನಾಂಶ ನೀಡಿದ್ದ ಪತಿರಾಯ ನಂತರ ತಾನು ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮನೆಯಲ್ಲಿದ್ದನು.
ನಂತರ, ತನಗೆ ಕೆಲಸವಿಲ್ಲದ ಕಾರಣ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದರಿಂದ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಕುಟುಂಬ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಪತಿರಾಯ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ದುಡಿಮೆಗೆ ಸದೃಢನಾಗಿದ್ದ ವ್ಯಕ್ತಿ ವಿಚ್ಛೇದಿತ ಒತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಹೇಳಿದೆ.