ಮಂಡ್ಯ :- ನೀತಿ ಸಂಹಿತೆ ಜಾರಿಯಾಗುತ್ತೆ ಎಂಬ ಭಯದಲ್ಲಿ ಅನುದಾನ ಇಲ್ಲದಿದ್ರು ಮದ್ದೂರು ಕ್ಷೇತ್ರದಾದ್ಯಂತ ನೂರಾರು ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ ಎಂದು ಮಾಜಿ
ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ಕೆ.ಎಂ.ಉದಯ್ ಕಿಡಿಕಾರಿದ್ದಾರೆ.
ಮದ್ದೂರು ತಾಲೂಕಿನ ಕದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ 16 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರದ ಜನತೆಗೆ ಸತತವಾಗಿ ಮಂಕುಬೂದಿ ಎರಚಿ ಮದ್ದೂರು ಕ್ಷೇತ್ರದಾದ್ಯಂತ ಸಿಕ್ಕ ಸಿಕ್ಕ ಕಡೆ ನೂರಾರು ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ. ಯಾವುದಕ್ಕಾದ್ರು ಅನುದಾನ ಬಂದ್ದಿದಿಯಾ, ಅಗ್ರಿಮೆಂಟ್ ಆಗಿದ್ದಿಯಾ, ಅಪ್ರೂವಲ್ ಆಗಿದ್ದಿಯಾ ನೀತಿ ಸಂಹಿತೆ ಘೋಷಣೆಯಾಗುತ್ತೆ ಎಂಬ ಭಯದಲ್ಲಿ ತರಾತುರಿಯಲ್ಲಿ ಗುದ್ದಲಿ ಪೂಜೆ ಮಾಡಿದ್ದಾರೆ.
ಕ್ಷೇತ್ರದಲ್ಲಿ ಯಾರೋ ಅನುದಾನ ತಂದು ಪೂಜೆ ಮಾಡಿರೋದಕ್ಕೆ ನಾನು ಪೂಜೆ ಮಾಡೋ ಅಗತ್ಯವಿಲ್ಲ. ಅಂತ ಚೀಪ್ ಪಾಪ್ಯುಲಾರಿಟಿ ತಗಳೋಕೆ ನನಗೂ ಇಷ್ಟವಿಲ್ಲ. ನಾನು ಅಭಿವೃದ್ಧಿ ಮಾಡ್ಬೇಕು ಅಂತ ಬಂದ್ದಿದಿನಿ. ಹೋದ ಕಡೆಯಲ್ಲ ಕ್ಷೇತ್ರದ ಜನರು ನನ್ನನ್ನ ಕೇಳ್ತಿದ್ದಾರೆ. ಮೂರ್ನಾಲ್ಕು ಬಾರಿ ಪೂಜೆ ಆಗಿದೆ. ಆದ್ರೆ, ರಸ್ತೆ ಕೆಲಸ ಆಗಿಲ್ಲ ಅಂತ ಅವರು ಯಾವ ಅನುದಾನ ತಂದು ಕೆಲಸ ಮಾಡಿದ್ದಾರೆ ಅಂತ ಗೊತ್ತಾಗ್ತಿಲ್ಲ
ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನ ಪ್ರಶ್ನಿಸಿದ್ದಾರೆ.
ಅಗ್ರಿಮೆಂಟ್, ಅನುಮೋದನೆ ಸಿಕ್ಕಿದ ಮೇಲೆ ನಾನು ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಪೂಜೆ ಮಾಡ್ತಿದ್ದೇನೆ. ಬೇಕಿದ್ದರೆ ಅಧಿಕಾರಿಗಳ ಬಳಿ ದಾಖಲೆ ಕೇಳಿ ಪರಿಶೀಲನೆ ನಡೆಸಲಿ ಎಂದು ಶಾಸಕ ಡಿ.ಸಿ.ತಮ್ಮಣ್ಣ ಗೆ ತಿರುಗೇಟು ನೀಡಿದರು.
ಇನ್ನು ಕೆಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಹೆಬ್ಬೆರಳು ಏತ ನೀರಾವರಿ ಯೋಜನೆಗೆ
ಇನ್ನೊಂದು ವಾರದಲ್ಲಿ ಚಾಲನೆ ಕೊಟ್ಟು ಆತಗೂರು ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗಮಿಸಿದ ಹಿನ್ನೆಲೆಯಲ್ಲಿ ಮದ್ದೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಮುಂಗಾರು ಮಳೆ ನಿರೀಕ್ಷೆಯಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದರು. ಆದರೆ, ಮಳೆ ಕೊರತೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಹೀಗಾಗಿ ಮುಂದಿನ ವರ್ಷದಿಂದ ಈ ರೀತಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇನ್ನೊಂದು ವಾರದಲ್ಲಿ ಆತಗೂರು ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕದಲೂರು ಗ್ರಾ.ಪಂ ಅಧ್ಯಕ್ಷ ತಿಮ್ಮೇಗೌಡ, ಸದಸ್ಯ ತಿಮ್ಮೇಗೌಡ, ತಾ.ಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್, ಸಿಡಿಪಿಓ ನಾರಾಯಣ್, ಮುಖಂಡರಾದ ಯತೀಶ್, ಹರೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ