ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು, ಧಾರವಾಡ ಜಿಲ್ಲೆಗೆ ₹212 ಕೋಟಿ ಬರ ಪರಿಹಾರದ ಹಣ ಬರಬೇಕಿತ್ತು. ಆದರೆ ಇದುವರೆಗೆ ಯಾವುದೇ ಹಣ ಜಮಾ ಆಗಿಲ್ಲ. ಈ ಕೂಡಲೇ ಧಾರವಾಡ ಜಿಲ್ಲೆಗೆ ಪರಿಹಾರ ಬಿಡುಗಡೆ ಮಾಡಲು ಆಗ್ರಹಿಸಿ ಬಾರುಕೋಲು ಚಳುವಳಿ ಮುಖಾಂತರ ರತ್ನಭಾರತ ರೈತ ಸಮಾಜದ ವತಿಯಿಂದ ಡಿ. 7ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರತ್ನ ರೈತ ಭಾರತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕಳಸಾ ಬಂಡೂರಿ ಮಹದಾಯಿ ಯೋಜನೆ ಹೋರಾಟಗಾರರು ಆದ ಹೇಮನಗೌಡ ಬಸನಗೌಡ್ರ ಆಗ್ರಹಿಸಿದರು.
ರಾಜ್ಯದಾದ್ಯಂತ ಬರಗಾಲಕ್ಕೆ ತುತ್ತಾಗಿ ರೈತರು ಬೆಳೆ ಸಾಲ ಮಾಡಿ ತುಂಬಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರು ತುಂಬಿದ ಬೆಳೆ ವಿಮೆ ಹಣವನ್ನು ಮಿಮಾ ಕಂಪನಿಯಿಂದ ಕೊಡಿಸಬೇಕು, ಕೇಂದ್ರ ಸರ್ಕಾರದಿಂದ ರೈತರಿಗೆ ₹6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ಬರುವ ₹4 ಸಾವಿರವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದ್ದು, ಕೂಡಲೇ ಪುನರಾರಂಭಿಸುವಂತೆ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆ ಮೇಲೆ ತೋರುವ ಕಾಳಜಿ ಕಳಸಾ ಬಂಡೂರಿ ಯೋಜನೆಗೆ ಏಕಿಲ್ಲ? ರಾಜ್ಯ ಸರ್ಕಾರ ಏಕೆ ಮಲತಾಯಿ ಧೋರಣೆ ತೋರುತ್ತಿದೆ? ಕಳಸಾ ಬಂಡೂರಿ ಮಹಾದಾಯಿ ಯೋಜನೆಯ ಕಾಮಗಾರಿಯನ್ನೂ ಪ್ರಾರಂಭಿಸಿಬೇಕು ಹಾಗೂ ರಾಜ್ಯದ ರೈತರಿಗೆ 3 ಫೇಸ್ 12 ತಾಸು ವಿದ್ಯುತ್ ಕೊಡಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ತಿಳಿಸಿದ್ದಾರೆ.