ಯಾವುದೇ ರೆಸ್ಟೋರೆಂಟ್ಗಳಿಗೆ ಹೋದರೂ ವೈಟರ್ ಸೂಪ್ ಅಥವಾ ಸ್ಟಾರ್ಟರ್ಸ್ ಏನಾದ್ರೂ ತೆಗೆದುಕೊಳ್ಳುತ್ತೀರಾ ಎಂದು ಮೊದಲು ಕೇಳುತ್ತಾರೆ. ಊಟಕ್ಕೂ ಮೊದಲು ಸೂಪ್ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಅಲ್ಲದೇ ದೇಹಕ್ಕೆ ನವಚೈತನ್ಯವನ್ನು ತುಂಬುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ವೆಜಿಟೇಬಲ್ ಮ್ಯಾಂಚೋ ಸೂಪ್ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ
ಬೇಕಾಗುವ ಸಾಮಗ್ರಿಗಳು:
ನೀರು – 4 ಕಪ್
ಹೆಚ್ಚಿದ ಶುಂಠಿ – 1 ಚಮಚ
ಹೆಚ್ಚಿದ ಬೆಳ್ಳುಳ್ಳಿ – 1 ಚಮಚ
ಹೆಚ್ಚಿದ ಹಸಿರು ಮೆಣಸಿನಕಾಯಿ – 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಹೆಚ್ಚಿದ ಫ್ರೆಂಚ್ ಬೀನ್ಸ್ – 2 ಚಮಚ
ಹೆಚ್ಚಿದ ಕ್ಯಾರೆಟ್ – 2 ಚಮಚ
ಹೆಚ್ಚಿದ ಕ್ಯಾಬೇಜ್ – 2 ಚಮಚ
ಹೆಚ್ಚಿದ ಕ್ಯಾಪ್ಸಿಕಮ್ – 2 ಚಮಚ
ಹೆಚ್ಚಿದ ಮಶ್ರೂಮ್ – 2 ಚಮಚ
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಚಮಚ
ಪೆಪ್ಪರ್ ಪೌಡರ್ – 1 ಚಮಚ
ಸೋಯಾ ಸಾಸ್ – 1 ಚಮಚ
ಜೋಳದ ಹಿಟ್ಟು – 4 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿರು ಮೆಣಸಿನ ಕಾಯಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
* ನಂತರ ಅದಕ್ಕೆ ಎಲ್ಲಾ ತರಕಾರಿಗಳನ್ನು ಹಾಕಿಕೊಂಡು ಬಳಿಕ ಪೆಪ್ಪರ್ ಪೌಡರ್, ಅಜಿನೊಮೊಟೊ ಮತ್ತು ಉಪ್ಪನ್ನು ಹಾಕಿಕೊಂಡು ಮತ್ತೆ ಎರಡು ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಇದಕ್ಕೆ ಸೋಯಾ ಸಾಸ್, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
* ಇದು ಚೆನ್ನಾಗಿ ಕುದಿಯಲು ಪ್ರಾರಂಭವಾದ ಬಳಿಕ ಜೋಳದ ಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡಿ ಈ ಮಿಶ್ರಣಕ್ಕೆ ಸೇರಿಸಿಕೊಂಡು ದಪ್ಪಗಾಗುವವರೆಗೆ ತಿರುವಿಕೊಳ್ಳಿ.
* ಸೂಪ್ ಸಾಧಾರಣ ದಪ್ಪವಾದ ಬಳಿಕ ಗ್ಯಾಸ್ ಆಫ್ ಮಾಡಿ ಸರ್ವಿಂಗ್ ಬೌಲ್ನಲ್ಲಿ ಹಾಕಿ ಬಿಸಿ ಬಿಸಿ ಸವಿಯಲು ಕೊಡಿ.