ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ.
ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾವುದೇ ದೈಹಿಕ ಶ್ರಮಗಳನ್ನು ನಡೆಸದೇ, ಹೊಟ್ಟೆಯ ಬೊಜ್ಜನ್ನು ಕರಗಿಸುವ ಸುಲಭದ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.
ಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ
ಹೊಟ್ಟೆಯ ಬೊಜ್ಜು ಹೆಚ್ಚಲು ಮುಖ್ಯವಾಗಿ ಕಾರಣವಾಗಬಹುದಾದ ಅಂಶವೆಂದರೆ, ಅತಿಯಾಗಿ ತಿನ್ನುವುದು. ಆದ್ದರಿಂದಲೇ ಮಿತವಾಗಿ ತಿನ್ನುವುದರಿಂದ ಅನಾವಶ್ಯಕ ಕ್ಯಾಲೋರಿ ಹೆಚ್ಚಳ ಹಾಗೂ ತೂಕ ಏರಿಕೆಯನ್ನು ತಡೆಗಟ್ಟಬಹುದು. ಇದು ದೀರ್ಘಾವಧಿಯಲ್ಲಿ ಪರಿಣಾಮ ನೀಡುವಂತಹ ಅಂಶವಾಗಿದ್ದು, ಆಹಾರ ತಿನ್ನುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ನಿಧಾನವಾಗಿ ತಿನ್ನಿ, ಜಗಿದು ತಿನ್ನಿ
ಮಿತವಾಗಿ ತಿನ್ನುವುದು ಹೇಗೆ ಮುಖ್ಯವೋ ಹಾಗೆಯೇ, ತಿನ್ನುವ ಆಹಾರವನ್ನು ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನುವುದು ಬಹಳ ಮುಖ್ಯ. ಎಷ್ಟೇ ತುರ್ತಿನ ಕಾರಣವಿದ್ದರೂ ಕೂಡ, ಆಹಾರ ತಿನ್ನುವಾಗ ಸಾವಧಾನದಿಂದಲೇ ತಿನ್ನಬೇಕು ಎಂದು ತಜ್ಞರು, ಹಿರಿಯರು ಹೇಳುತ್ತಾರೆ. ಅಂತೆಯೇ, ನಿಧಾನವಾಗಿ, ಜಗಿದು ತಿಂದಾಗ ಆಹಾರ ಚೆನ್ನಾಗಿ ಜೀರ್ಣವಾಗುವುದಲ್ಲದೇ, ದೀರ್ಘಾವಧಿಯಲ್ಲಿ ಉತ್ತಮ ಪರಿಣಾಮವನ್ನು ನೀಡುತ್ತದೆ.
ಕೆಲಸದ ಒತ್ತಡವನ್ನು ಬದಿಗಿಡಿ, ಚೆನ್ನಾಗಿ ನಿದ್ರಿಸಿ
ಉದರ ಭಾಗದ ಬೊಜ್ಜಿಗೆ ಮುಖ್ಯ ಕಾರಣ ನಿದ್ರೆಯ ಕೊರತೆ. ದಿನಕ್ಕೆ ಕನಿಷ್ಠ ಏನಿಲ್ಲವೆಂದರೂ 7-8 ಗಂಟೆ ನಿದ್ರೆ ಅವಶ್ಯವಾಗಿ ಬೇಕು. ಒತ್ತಡದ ಕೆಲಸದಲ್ಲಿ ದೇಹವನ್ನು, ಮನಸ್ಸನ್ನು ತೊಡಗಿಸಿ ಅದಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡದಿದ್ದಾಗ, ಅಡ್ಡ ಪರಿಣಾಮಗಳಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಬೊಜ್ಜು, ಅಧಿಕ ತೂಕ ಮೊದಲಾದವುಗಳೂ ಒಂದು. ಆದ್ದರಿಂದಲೇ, ದಿನಚರಿಯನ್ನು ಸರಿದೂಗಿಸಿ, ಕೆಲಸದ ಒತ್ತಡವಿದ್ದರೂ ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳದಿರುವುದು ಆರೋಗ್ಯದ ದೃಷ್ಟಿಯಿಂದ ಜಾಣತನ ಮತ್ತು ಅತ್ಯಗತ್ಯ.
ಮಧ್ಯಾಹ್ನ ನಿದ್ರೆ ಮಾಡಬೇಡಿ
ತಜ್ಞರ ಪ್ರಕಾರ, ಬೊಜ್ಜು ಹಾಗೂ ತೂಕವನ್ನು ಕಡಿಮೆಗೊಳಿಸಲು ನಿದ್ರೆ ಹೇಗೆ ಮುಖ್ಯವೋ ಹಾಗೆಯೇ ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಅಷ್ಟೇ ಹಾನಿಕರ. ಮಧ್ಯಾಹ್ನ ದೇಹಕ್ಕೆ ತುಸು ವಿಶ್ರಾಂತಿ ಬೇಕು, ನಿಜ. ಆದರೆ ಅದು ನಿದ್ರೆಯ ರೂಪದಲ್ಲಿರಬಾರದು. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಕ್ಕೂ ಅಧಿಕವಾಗಿ ಮಧ್ಯಾಹ್ನ ಮಲಗಿದಾಗ ಹೊಟ್ಟೆಯ ಬೊಜ್ಜು ಏರಿಕೆಯಾಗುತ್ತದೆ. ಆದ್ದರಿಂದಲೇ, ಮಿತವಾಗಿ ಆಹಾರ ಸೇವಿಸಿ, ತುಸುವೇ ವಿಶ್ರಾಂತಿ ಪಡೆದು ಮತ್ತಷ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಳ್ಳುವುದು ಬಹುಮುಖ್ಯ.
ಕೆಲಸದ ಭಂಗಿಯನ್ನು ಸರಿಯಾಗಿಸಿಕೊಳ್ಳಿ
ಬೊಜ್ಜು ಏರಿಕೆಯಾಗಲು ಮತ್ತೊಂದು ಮುಖ್ಯ ಕಾರಣ, ಕೆಲಸಕ್ಕೆ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು. ಇದರಿಂದಾಗಿ ದೀರ್ಘಾವದಿಯಲ್ಲಿ ಬೇರೆ ಅಡ್ಡ ಪರಿಣಾಮಗಳೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಬೆನ್ನು ನೇರವಾಗಿಸಿ, ಉತ್ತಮ ಭಂಗಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಒಳ್ಳೆಯದು. ದೈಹಿಕ ಶ್ರಮದ ಕೆಲಸವಾದರೆ, ಅದನ್ನು ಜಾಣತನದಿಂದ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ನೀರು ಕುಡಿಯಿರಿ
ನೀರನ್ನು ತೂಕ ಇಳಿಸಲು, ಬೊಜ್ಜನ್ನು ಕರಗಿಸುವ ಉದ್ದೇಶಕ್ಕೆ ಕುಡಿಯುವುದಕ್ಕಿಂತ, ದೇಹಕ್ಕೆ ಅದು ಅಗತ್ಯವಾಗಿ ಬೇಕು ಎಂಬ ಭಾವನೆ ಬೆಳೆಸಿಕೊಳ್ಳಿ. ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದಕ್ಕಿಂತ, ಕಾಲಕಾಲಕ್ಕೆ ನೀರನ್ನು ಕುಡಿಯುತ್ತಿರುವುದು ದೇಹವನ್ನು ಉಲ್ಲಾಸಿತವಾಗಿರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತದೆ. ಈ ಅಭ್ಯಾಸದಿಂದ ದೀರ್ಘಾವಧಿಯಲ್ಲಿ ಉತ್ತಮ ಪ್ರಯೋಜನಗಳಿದ್ದು, ಉದರ ಭಾಗದ ಬೊಜ್ಜು ತಾನಾಗಿಯೇ ಕರಗುತ್ತದೆ.
ಮೆಣಸು
ತುಂಬಾ ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು. ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು.
ಮೊಟ್ಟೆ
ಪ್ರೋಟೀನ್ ಹೊಂದಿರುವಂತಹ ಮೊಟ್ಟೆಯು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದಾಗಿ ನೀವು ಕಡಿಮೆ ತಿನ್ನುವಿರಿ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಕರಗುವುದು. ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದ ಕೊಬ್ಬು ಕರಗಿಸಿಕೊಳ್ಳಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
ಬೀನ್ಸ್
ಹೊಟ್ಟೆಯ ಕೊಬ್ಬು ಕರಗಿಸುವ ವಿಚಾರಕ್ಕೆ ಬಂದರೆ ಆಗ ಮುಖ್ಯವಾಗಿ ಬೀನ್ಸ್ ಪ್ರಕೃತಿಯು ಮನುಷ್ಯನಿಗೆ ನೀಡಿರುವಂತಹ ಒಂದು ಉಡುಗೊರೆ ಎಂದು ಹೇಳಬಹುದು. ಇದು ಕಾರ್ಬ್ಸ್ ಮತ್ತು ಪ್ರೋಟೀನ್ ನ ಸಮತೋಲನ ಕಾಪಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುತುಂಬಿರುವಂತೆ ಮಾಡುವುದು. ಕಪ್ಪು ಬೀನ್ಸ್, ಕಿಡ್ನಿ ಬೀನ್ಸ್, ಮಸೂರ, ಗಾರ್ಬಾಂಜೊ ಮತ್ತು ಕ್ಯಾನೆಲ್ಲಿನಿ ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ.