ನವದೆಹಲಿ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಭಾರತೀಯ ಮೂಲದ ವಿದ್ಯಾರ್ಥಿನಿ ನೀಲಂ ಶಿಂಧೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನೀಲಂ ಶಿಂಧೆ ಕೋಮಾ ಸ್ಥಿತಿಯಲ್ಲಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ನೀಲಂ ಶಿಂಧೆ ಕಳೆದ ಫೆಬ್ರವರಿ 14 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದು ಸದ್ಯ ಕೋಮಾ ಸ್ಥಿತಿಯಲ್ಲಿರುವ ನೀಲಂ ಶಿಂಧೆ ಅವರನ್ನು ಅಮೆರಿಕಾದಲ್ಲಿರುವ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನೀಲಂ ಶಿಂಧೆ ಅವರ ಪರಿಸ್ಥಿತಿಯನ್ನು ಸ್ನೇಹಿತರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದಷ್ಟು ಬೇಗ ಅಮೆರಿಕಾಗೆ ಬಂದು ನೀಲಂ ಶಿಂಧೆ ಚಿಕಿತ್ಸೆಗೆ ನೆರವಾಗುವಂತೆ ಕೋರಿಕೊಂಡಿದ್ದಾರೆ. ಇತ್ತೀಚೆಗೆ ನೀಲಂ ಶಿಂಧೆ ಅವರ ತಾಯಿ ಕೂಡ ನಿಧನರಾಗಿದ್ದರು. ಇದೀಗ ಈ ಆಘಾತದ ಸುದ್ದಿ ಕೇಳಿ ನೀಲಂ ಶಿಂಧೆ ತಂದೆ ತಾನಾಜಿ ಶಿಂಧೆ ಅವರು ತಕ್ಷಣವೇ ಆಮೆರಿಕಾಗೆ ಹೋಗಲು ಸಹಾಯ ಮಾಡಲು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಕುಟುಂಬಸ್ಥರು ನಾವು ಪಾಸ್ಪೋರ್ಟ್ ಆಫೀಸ್ಗೆ ತೆರಳಿದ್ದು, ಆದರೆ ಸೂಕ್ತವಾದ ಸ್ಪಂದನೆ ಸಿಗಲಿಲ್ಲ. ಕೇಂದ್ರ ಸರ್ಕಾರದಿಂದ ತಕ್ಷಣವೇ ವೀಸಾ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಎನ್ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಅವರು ತಾನಾಜಿ ಶಿಂಧೆ ಅವರ ನೆರವಿಗೆ ಧಾವಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ಗೆ ಮನವಿ ಮಾಡಿರುವ ಸಂಸದೆ ಸುಪ್ರಿಯಾ ಸುಳೆ, ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಜೈಶಂಕರ್ ಯಾವಾಗಲೂ ಸಹಾಯ ಮಾಡುತ್ತಾರೆ. ನೀಲಂ ಶಿಂಧೆ ಅವರ ತಂದೆಗೆ ಆಮೆರಿಕಾದ ವೀಸಾ ಪಡೆಯಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ.