ಬೆಂಗಳೂರು:- ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಆಗಿ ಪೋಸ್ಟಿಂಗ್ ಪಡೆಯಲು ಬಹಳಷ್ಟು ಜನರು ಜಿದ್ದಾಜಿದ್ದಿ ನಡೆಸುತ್ತಿರುತ್ತಾರೆ. ಆದರೆ, ಬೆಂಗಳೂರಿನ ರಾಜಾಜಿನಗರ ಕೇಂದ್ರ ಭಾಗದಲ್ಲಿಯೇ ಇರುವ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ತಿಂಗಳಿಂದ ಪೊಲೀಸ್ ಇನ್ಸ್ಪೆಕ್ಟರ್ ಇಲ್ಲದೇ ಅನಾಥವಾಗಿದೆ ಎನ್ನುವುದನ್ನು ಕೇಳಿದರೆ ಬೆಂಗಳೂರು ನಿವಾಸಿಗಳಿಗೆ ಸೋಜಿಗವಾಗುತ್ತದೆ. ಇನ್ನು ನಗರದ ಕೇಂದ್ರ ಭಾಗದಲ್ಲಿರುವ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ವಿಲೇವಾರಿ ಮಾಡಲು ದಕ್ಷ ಅಧಿಕಾರಿಯೇ ಇಲ್ಲವೆಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಶಾಸಕ ಎಸ್. ಸುರೇಶ್ ಕುಮಾರ್, ಈ ಬಗ್ಗೆ ಸರ್ಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹಾಗೂ ಎಡಿಜಿಪಿ ಅವರ ಬಳಿ ರಾಜಾಜಿನಗರ ಪೊಲೀಸ್ ಠಾಣೆಗೆ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪತ್ರವೊಂದನ್ನು ಸಿದ್ಧಪಡಿಸಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆ ಕಳೆದ ಸುಮಾರು ಒಂದು ತಿಂಗಳಿನಿಂದ ಪೊಲೀಸ್ ಇನ್ಸ್ಪೆಕ್ಟರ್ ಇಲ್ಲದೆ ಒಂದು ರೀತಿ ಅನಾಥವಾಗಿದೆ. ದಿನಾಂಕ: 20.09.2023 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಈ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಅಂದಿನಿಂದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಾಣೆಯಾಗಿದ್ದರು. ಅವರು ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿದ ವಿದ್ಯಮಾನವೂ ನಡೆಯಿತು.
ನಂತರ ದಿನಾಂಕ: 02.11.2023 ರಂದು ಆ ಪೊಲೀಸ್ ಇನ್ಸ್ಪೆಕ್ಟರ್ ಅನ್ನು ಅಮಾನತ್ತು ಮಾಡಲಾಯಿತು. ನಾನು ಈ ಕುರಿತು ಗೃಹ ಸಚಿವರ ಬಳಿ, ನಗರದ ಪೊಲೀಸ್ ಆಯುಕ್ತರ ಬಳಿ ಹಾಗೂ ಎಡಿಜಿಪಿ ರವರ ಬಳಿ ಈ ಠಾಣೆಗೆ ಓರ್ವ ಸೂಕ್ತ, ದಕ್ಷ ಅಧಿಕಾರಿಯನ್ನು ನೇಮಿಸಲು ಮನವಿ ಮಾಡಿದ್ದೇನೆ. ರಾಜ್ಯದ ರಾಜಧಾನಿಯ ಒಂದು ಪ್ರಮುಖ ಪೊಲೀಸ್ ಠಾಣೆ ಅನಾಥ ಸ್ಥಿತಿಯಲ್ಲಿ ಬಳಲುವುದು ಆರೋಗ್ಯಕರವಲ್ಲ. ಈ ಕೂಡಲೇ, ಈ ಠಾಣೆಗೆ ಓರ್ವ ದಕ್ಷ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.