ಮಧುಮೇಹ ಯಾರಿಗೆ ಬೇಕಾದರೂ ಬರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸಹ ಮಧುಮೇಹ ಬರುವುದನ್ನು ಕಾಣಬಹುದು. ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧ. ಟೈಪ್ 1 ಡಯಾಬಿಟೀಸ್ ಮತ್ತು ಟೈಪ್ 2 ಡಯಾಬಿಟೀಸ್. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ (ವಂಶವಾಹಿ) ಕಾರಣ ಸೇರಿದಂತೆ ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ ಮಧುಮೇಹ ಕಾಯಿಲೆ ಸಂಭವಿಸುತ್ತದೆ. ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
ವಿಶ್ವ ಮಧುಮೇಹ ದಿನದ ಇತಿಹಾಸ:
ಮಧುಮೇಹ ದಿನವನ್ನು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೌಂಡೇಶನ್ (IDF) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (WHO) ಜಂಟಿ ಆಶ್ರಯದಲ್ಲಿ ಪ್ರಾರಂಭಿಸಲಾಯಿತು. 1991 ರಿಂದ ಇದನ್ನು ಪ್ರಪಂಚದಾದ್ಯಂತ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು. ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸುವ ಮುಖ್ಯ ಕಾರಣವೆಂದರೆ, ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿಯಾದ ಸರ್ ಫ್ರೆಡಿಕ್ ಬ್ಯಾಂಟಿಂಗ್ ಅವರ ಜನ್ಮ ದಿನದ ನೆನಪಿಗಾಗಿ ನವೆಂಬರ್ 14 ರಂದು ಈ ವಿಶೇಷವಾದ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಧುಮೇಹ ದಿನದ ಮಹತ್ವ:
ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿದ್ದಾರೆ, ಮಧುಮೇಹ ಕಾಯಿಲೆಯಿಂದ ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಈ ಕಾಯಿಲೆ ಉಂಟಾಗಲು ಮುಖ್ಯ ಕಾರಣ ಎಂದು ಹೇಳಬಹುದು. ಹಾಗಾಗಿ ಈ ಕಾಯಿಲೆಯ ಗಂಭೀರ ಅಪಾಯಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುದು ವಿಶ್ವ ಮಧುಮೇಹ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ
ವಿಶ್ವ ಮಧುಮೇಹ ದಿನದ ಸಂದರ್ಭದಲ್ಲಿ, ಮಧುಮೇಹ ಇರುವವರಿಗೆ ಪ್ರಯೋಜನಕಾರಿಯಾದ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.
ಸಿಟ್ರಸ್ ಹಣ್ಣುಗಳು: ಕಿತ್ತಳೆ ಮತ್ತು ನಿಂಬೆ ಹಣ್ಣುಗಳು ತಾಜಾತನ ಮತ್ತು ಹುಳಿ ರುಚಿಗೆ ಹೆಸರುವಾಸಿಯಾಗಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಸಿಟ್ರಸ್ ಹಣ್ಣುಗಳು ಪೊಟ್ಯಾಸಿಯಮ್ ಮತ್ತು ಫೋಲೇಟ್ ಜೊತೆಗೆ ಆರೋಗ್ಯಕರ ಫೈಬರ್ ಅನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಯೋಗರ್ಟ್: ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಆಹಾರದಲ್ಲಿ ಯೋಗರ್ಟ್ ಸೇರಿಸಿಕೊಳ್ಳಿ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (HSPH) ಸಂಶೋಧಕರು ನಡೆಸಿದ ಅಧ್ಯಯನವು ಯೋಗರ್ಟ್ ಸೇವನೆಯು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಜೊತೆಗೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ಗಳು ಸಮೃದ್ಧವಾಗಿದ್ದು ಆರೋಗ್ಯವನ್ನು ಸುಧಾರಿಸುತ್ತದೆ.
ಚಿಯಾ ಬೀಜಗಳು: ಚಿಯಾ ಬೀಜಗಳು ತೂಕ ನಷ್ಟಕ್ಕೆ ಸಹಾಯ ಮಾಡುವ ಪರಿಣಾಮಕಾರಿ ಸೂಪರ್ಫುಡ್ ಎಂದು ಹೇಳಲಾಗುತ್ತದೆ. ಮಧುಮೇಹವನ್ನು ನಿಭಾಯಿಸಲು ಚಿಯಾ ಬೀಜಗಳು ಸಹ ನಿಮಗೆ ಸಹಾಯ ಮಾಡಬಹುದು ಎಂದು ತಜ್ಞರು ಸೂಚಿಸುತ್ತಾರೆ. ಅವು ಉತ್ಕರ್ಷಣ ನಿರೋಧಕಗಳು, ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಫೈಬರ್ ಅನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ಮಧುಮೇಹದ ಅಪಾಯವನ್ನು ಮತ್ತು ಅದಕ್ಕೆ ಸಂಬಂಧಿಸಿದ ತೊಡಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ಸ್: ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಅಲ್ಲದೆ, ಮಧುಮೇಹ ಉರಿಯೂತ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಧಾನ್ಯಗಳು: ನೀವು ಮಧುಮೇಹಿಗಳಾಗಿದ್ದರೆ, ಬಾರ್ಲಿ ಮತ್ತು ಓಟ್ಸ್ನಂತಹ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗದಂತೆ ತಡೆಯುತ್ತದೆ. ಧಾನ್ಯಗಳು ವಿಟಮಿನ್ ಬಿ, ಕಬ್ಬಿಣ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ಅತ್ಯಂತ ಪ್ರಯೋಜನಕಾರಿಯಾಗಿದೆ.