ಬೆಂಗಳೂರು: ಕಣ್ಣಿಗೆ ಕಾಣದಂತೆ ಗುಪ್ತಗಾಮಿನಿಯಂತೆ ಎಲ್ಲೆಡೆ ಹರಿದಾಡುತ್ತಿರುವ ಕೊರೊನಾ ದಿನೆ ದಿನೇ ಆತಂಕ ಹುಟ್ಟಿಸಿದೆ. ಬೆಂಗಳೂರಿನಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ಸಾವು-ನೋವುಗಳು ಸಹ ಹೆಚ್ಚಿವೆ.ಇದ್ರ ನಡುವೆ ಚಿತಾಗಾರ ಸಿಬ್ಬಂದಿ ಬಿಬಿಎಂಪಿಗೆ ಶಾಕ್ ಕೊಟ್ಟಿದ್ದಾರೆ. ಜನವರಿ ಮೊದಲ ವಾರದಿಂದ ಚಿತಾಗಾರದಲ್ಲಿ ಹಣ ಸುಡೋದಿಲ್ಲ ಅಂತ ಎಚ್ಚರಿಸಿರೋದು ಮೃತದೇಹ ಸುಡೋದಕ್ಕೂ ಹಣಗಾಟದ ಭೀತಿ ಎದುರಾಗಿದೆ.
ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿ ಎಂದು ಜಗದ್ವಿಖ್ಯಾತವಾಗಿರುವ ಬೆಂಗಳೂರು ಎಂಬ ಮಾಯಾನಗರಿಯ ಗರ್ಭದಲ್ಲಿ, ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಸ್ಮಶಾನದಲ್ಲಿ ವಾಸವಾಗಿರುವ ರುದ್ರಭೂಮಿ ಕುಟುಂಬಗಳ ಬದುಕು ಅಕ್ಷರಶಃ ಸುಡುಗಾಡಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಸ್ಮಶಾನಗಳಿವೆ. ಇವುಗಳಲ್ಲಿ ವಂಶ ಪಾರಂಪರ್ಯವಾಗಿ ಗುಂಡಿ ತೆಗೆದು ಶವಗಳಿಗೆ ಮುಕ್ತಿ ಕಾಣಿಸುವ ಕಾಯಕದಲ್ಲಿ ತೊಡಗಿರುವ ನೂರಾರು ಕುಟುಂಬಗಳಿವೆ. ಹಲವು ದಶಕಗಳಿಂದ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಈ ರುದ್ರಭೂಮಿ ನೌಕರರನ್ನು ಖಾಯಂ ಗೊಳಿಸುವತ್ತ ಬಿಬಿಎಂಪಿಯಾಗಲಿ, ಸರ್ಕಾರ ಯಾಗಲಿ ಇದುವರೆಗೆ ಯೋಚನೆ ಯನ್ನೇ ಮಾಡಿಲ್ಲ.ಇದರಿಂದ ಕೆರಳಿರುವ ಪಾಲಿಕೆಯ ಗುತ್ತಿಗೆ ರುದ್ರಭೂಮಿ ಸಿಬ್ಬಂದಿ ಪಾಲಿಕೆ ವಿರುದ್ದ ಬೀದಿಗಿಳಿದಿದ್ರು.
ಹೌದು. ಯಾವಾಗಲೂ ಸೈಲೆಂಟ್ ಆಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಇಂದು ಧಿಕ್ಕಾರ, ಆಕ್ರೋಶಗಳ ತಾಣವಾಗಿ ಮಾರ್ಪಟ್ಟಿತ್ತು. ಬೆಂಗಳೂರಿನ ವಿವಿಧ ರುದ್ರಭೂಮಿಗಳಲ್ಲಿ ಸೇವೆ ಸಲ್ಲಿಸಿಸೋ ಸಿಬ್ಬಂದಿ ಪಾಲಿಕೆ ಮುಖ್ಯ ಕಚೇರಿ ಮುಂಭಾಗವೇ ಧರಣಿ ಕುಳಿತುಕೊಂಡ್ರು. ರುದ್ರಭೂಮಿ ನೌಕರರನ್ನು ಡಿ ನೌಕರರಾಗಿ ಪರಿಣಗಣಿಸಬೇಕು. -ಸಂಬಳ ಕೂಡ ಸರಿಯಾದ ಸಮಯಕ್ಕೆ ಆಗ್ತಾ ಇಲ್ಲ. ಹೀಗಾಗಿ ಅದು ನಿಗಧಿತಸಮಯಕ್ಕೆ ಆಗಬೇಕು ಅಂತ ಪಾಲಿಕೆ ಮುಖ್ಯ ಆಯುಕ್ತರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಚಿತಾಗಾರ ಸಿಬ್ಬಂದಿ ಬಿಬಿಎಂಪಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು ಈಡೇರಿಸದಿದ್ದರೆ ಮೃತದೇಹ ದಹನ ಮಾಡದೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೊವಿಡ್ನಿಂದ ಸತ್ತರೇ ವಾರವಿಡೀ ಮೃತದೇಹ ಇಟ್ಟು ಕಾಯುವ ಸ್ಥಿತಿ ಬಂದರೂ ಬರಬಹುದು. ಬಿಬಿಎಂಪಿ ಎಚ್ವೆತ್ತಿಲ್ಲ ಅಂದರೆ ಸಂಕಷ್ಟ ಗ್ಯಾರಂಟಿ ಎಂದು ರುದ್ರಭೂಮಿ ನೌಕರರು ಬಿಬಿಎಂಪಿ ಮುಂದೆ ಹಲವು ಬೇಡಿಕೆ ಇಟ್ಟು ಎಚ್ಚರಿಕೆ ನೀಡಿದ್ದಾರೆ. ಸದ್ಯ ಜನವರಿ 4 ವರಿಗೆ ಡೆಡ್ಲೈನ್ ನೀಡಿದ್ದು,ಈ ದಿನದೊಳಗೆ ಈಡೇರದಿದ್ದರೆ ಚಿತಾಗಾರ ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಪಾಲಿಕೆ ಕೂಡ ಸಮಸ್ಯೆ ಬಗೆಹರಿಸದೆ ಸೈಲೆಂಟ್ ಆಗಿದೆ.
ಅನಾಥ ಶವಗಳು, ಅಪಘಾತಗಳಲ್ಲಿ ನುಜ್ಜುಗಜ್ಜಾದ ಮೃತದೇಹಗಳು, ಹಾವುಕಚ್ಚಿ, ವಿಷ ಕುಡಿದು ಮೃತಪಟ್ಟ ಶವಗಳು, ಕೀವು-ರಕ್ತ ಸೋರುವ ಹಾಗು ದುರ್ವಾಸನೆ ಬೀರುವ ಹೆಣಗಳಿಗೆ ಯಾವುದೇ ತಾರತಮ್ಯ ಮಾಡದೇ, ತಾಯಿ ಸ್ಥಾನದಲ್ಲಿ ನಿಂತು ಮುಕ್ತಿ ಕಾಣಿಸುವ ರುದ್ರಭೂಮಿ ನೌಕರರ ಆಕ್ರಂದನ ಅರಣ್ಯರೋಧನವಾಗಿದೆ. ಕಿತ್ತು ತಿನ್ನುವ ಬಡತನ, ಅನಕ್ಷರತೆ, ಹಸಿವು ಮತ್ತು ಅವಮಾನ ಇವರ ಆತ್ಮಸ್ಥೈರ್ಯವನ್ನೇ ಕಸಿದುಕೊಂಡಿವೆ. ಇವರ ಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಿ ಸುಡುಗಾಡಿನಲ್ಲಿ ಕಳೆದು ಹೋಗುತ್ತಿದ್ದಾರೆ.ಆದ್ರೂ ಬಿಬಿಎಂಪಿ ಇವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮಾಡೋ ಕೆಲಸಕ್ಕೆ ಸಂಬಳ ನೀಡದೆ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಜನವರಿ 5 ರಿಂದ ಹೋರಾಟಕ್ಕೆ ಮುಂದಾಗಿದ್ದು, ನಗರದಲ್ಲಿ ಹೆಣ ಸುಡೋದಕ್ಕೂ ಹೆಣಗಾಡುವ ಭೀತಿ ಎದುರಾಗಿದೆ