ಬೆಂಗಳೂರು:– ಈತ ಓದಿದ್ದು ಬರೀ SSLC, ಆದ್ರೆ ಇವನು ವೃತ್ತಿಯಲ್ಲಿ ಡಾಕ್ಟರ್. ಅರೆ ಹೇಗೆ ಅಂತೀರಾ!? ಈ ಸ್ಟೋರಿ ಪೂರ್ತಿ ಓದಿ.
ಹಸುಗೂಸು ಮಾರಾಟ ಹಗರಣದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ನಕಲಿ ವೈದ್ಯನೂ ಇದ್ದಾನೆ. ಅವನೇ ಕೆವಿನ್ ಅಲಿಯಾಸ್ ಕರಣ್.
ಬಡ ಕುಟುಂಬಗಳ ಗರ್ಭಿಣಿಯರನ್ನು ಮೊದಲೇ ಗೊತ್ತು ಮಾಡಿಕೊಂಡು ಅವರಿಗೆ ಹಣದ ಆಮಿಷ ಒಡ್ಡಿ, ಹೆರಿಗೆಯಾಗುತ್ತಿದ್ದಂತೆಯೇ ಮಗುವನ್ನು ಬೇರೆಯವರಿಗೆ ಮಾರಾಟ ಮಾಡುವ ಜಾಲ ಇದಾಗಿದೆ.
ಐವಿಎಫ್ ನಂಥ ಕೃತಕ ಗರ್ಭಧಾರಣಾ ವಿಧಾನದ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಮೊದಲ ಹಂತದಲ್ಲಿ ಬಂಧಿತರಾದರೆ ಬಳಿಕ ಕೆವಿನ್ ಅಲಿಯಾಸ್ ಮತ್ತು ರಮ್ಯ ಎಂಬವರನ್ನು ಬಂಧಿಸಲಾಗಿತ್ತು.
ಎರಡನೇ ಹಂತದಲ್ಲಿ ಸಿಕ್ಕಿಬಿದ್ದಿರುವ ಕೆವಿನ್ ಅಲಿಯಾಸ್ ಕರಣ್ ಒಬ್ಬ ನಕಲಿ ವೈದ್ಯ. ಅವನು ಓದಿದ್ದು ಬರೀ ಎಸ್ಎಸ್ಎಲ್ಸಿ. ಆದರೆ, ತಾನೊಬ್ಬ ಡಾಕ್ಟರ್ ಎಂದು ಪೋಸ್ ಕೊಟ್ಟು ಶಾಪ್ ಇಟ್ಟುಕೊಂಡಿದ್ದ. ಅವನ ಶೈಲಿ ನೋಡಿದರೆ ಥೇಟ್ ಮುನ್ನಾ ಭಾಯ್ ಎಂಬಿಬಿಎಸ್ ಥರಾನೇ ಇದ್ದಾನೆ.
ಡಾ. ಕೆವಿನ್ ಅಲಿಯಾಸ್ ಕರಣ್ನ ಶಾಪ್ ಇರುವುದು ರಾಜಾಜಿ ನಗರದಲ್ಲಿ. ಅವನು ಆ ಭಾಗದಲ್ಲಿ ದೊಡ್ಡ ಡಾಕ್ಟರ್ ನಂತೆ ಪೋಸು ಕೊಡುತ್ತಿದ್ದ. ಪೊಲೀಸರಿಗೆ ಆತನೂ ಹಸುಗೂಸು ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ಆತನನ್ನು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ ಆತನ ನಿಜವಾದ ಮುಖ ಬಯಲಾಗಿದೆ. ಅಸಲಿಗೆ ಅವನು ಎಂಬಿಬಿಎಸ್ ಓದೇ ಇಲ್ಲ. ನೀನು ಡಾಕ್ಟರ್ ಅಲ್ವಾ? ಎಲ್ಲಿದೆ ಸರ್ಟಿಫಿಕೇಟ್ ಎಂದು ಕೇಳಿದರೆ ಥರ್ಡ್ ಇಯರ್ ಆಗಿದೆ. ಈಗಲೂ ಕಲೀತಾ ಇದೇನೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನಿಜವೆಂದರೆ, ಅವನು ಎಂಬಿಬಿಎಸ್ ಕಲಿತದ್ದೂ ಇಲ್ಲ, ವಿದ್ಯಾರ್ಥಿಯೂ ಅಲ್ಲ. ಅವನು ಓದಿದ್ದು ಬರೀ ಎಸ್ಎಸ್ಎಲ್ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್ಗೆ ಹೋಗಿ ಕಲಿತದ್ದೂ ಅಲ್ಲ. ಅವನು ಕರೆಸ್ಪಾಂಡೆನ್ಸ್ ನಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದು!
ಎಸ್ಸೆಸ್ಸೆಲ್ಸಿಯನ್ನು ಹೇಗೋ ಪಾಸ್ ಮಾಡಿಕೊಂಡಿದ್ದ ಆತ ಬಳಿಕ ವಿಜಯನಗರದಲ್ಲಿ ಡಾಕ್ಟರ್ ಒಬ್ಬರ ಬಳಿ ಕಂಪೌಂಡರ್ ಕೆಲಸ ಮಾಡುತ್ತಿದ್ದ. ಈ ವೇಳೆ ಜ್ವರ ಕೆಮ್ಮು ನೆಗಡಿ, ಮೈ ಕೈ ನೋವು ಹೀಗೆ ಸಣ್ಣಪುಟ್ಟ ರೋಗಗಳಿಗೆ ಯಾವ ಮಾತ್ರೆ ನೀಡ್ತಾರೆ ಅಂತಾ ತಿಳ್ಕೊಂಡಿದ್ದ. ಅಸಲಿಗೆ ಡಾಕ್ಟರ್ ಬರೆದುಕೊಡುತ್ತಿದ್ದ ಮಾತ್ರೆಗಳನ್ನು ಇವನೇ ರೋಗಿಗಳಿಗೆ ನೀಡುತ್ತಿದ್ದ. ಬುದ್ಧಿವಂತನಾಗಿದ್ದ ಆತನಿಗೆ ಸಾಮಾನ್ಯ ಸಣ್ಣ ಪುಟ್ಟ ರೋಗಗಳಿಗೆ ಯಾವ ಔಷಧ ಕೊಡಬಹುದು ಎಂಬುದನ್ನು ನೋಡಿ ನೋಡಿಯೇ ಅರ್ಥ ಮಾಡಿಕೊಂಡಿದ್ದ.
ಅಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಕೆಲವು ಸಮಯದಲ್ಲಿ ಕೆಲಸ ಬಿಟ್ಟಿದ್ದ. ಅಲ್ಲಿ ಕೆಲಸ ಬಿಟ್ಟವನೇ ನೇರವಾಗಿ ರಾಜಾಜಿ ನಗರದಲ್ಲಿ ಕ್ಲಿನಿಕ್ ಇಟ್ಟಿದ್ದ. ರೋಗಿಗಳು ಕೂಡಾ ನಿಜವಾದ ಡಾಕ್ಟರ್ ಇರಬಹುದು ಅಂತಾ ಚೆಕ್ ಮಾಡಿಸಿಕೊಳ್ತಿದ್ದರು.
ಕೇವಲ 100 ರೂ. ಪಡೆದು ಪರೀಕ್ಷೆ ಮಾಡಿ ಔಷಧ ಚೀಟಿ ಕೊಡುತ್ತಿದ್ದ ಆತನ ಬಗ್ಗೆ ಪ್ರದೇಶದಲ್ಲಿ ಒಳ್ಳೆಯ ಮಾತೇ ಇತ್ತು. ಯಾಕೆಂದರೆ, ಆತ ಕೊಡುತ್ತಿದ್ದುದು ಬರೀ ಜ್ವರ ಮತ್ತು ಶೀತಕ್ಕೆ ಮಾತ್ರ ಔಷಧ. ಮೈಕೈ ನೋವಿಗೆ ಪೇನ್ ಕಿಲ್ಲರ್ ಕೊಡ್ತಿದ್ದ.!
ಸಿಸಿಬಿ ವಿಚಾರಣೆಯಲ್ಲಿ ನಕಲಿ ಡಾಕ್ಟರ್ ನ ಅಸಲಿ ಮುಖ ಅನಾವರಣವಾಗಿದೆ.