ಬೆಂಗಳೂರು:- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಎಚ್.ಡಿ.ದೇವೇಗೌಡ ಅವರನ್ನು ‘ವಜಾ’ಗೊಳಿಸಿ ಉಚ್ಚಾಟಿತರಾಗಿದ್ದ ಸಿ.ಕೆ.ನಾಣು ಅವರನ್ನು ನೂತನ ‘ರಾಷ್ಟ್ರೀಯ ಅಧ್ಯಕ್ಷ’ರನ್ನಾಗಿ ಆಯ್ಕೆ ಮಾಡಲಾಗಿದೆ.
ಸಿ.ಕೆ.ನಾಣು ಅವರು ಅಧ್ಯಕ್ಷರಾಗಿರುವ ಪಕ್ಷಕ್ಕೆ ಚಿಹ್ನೆ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡಲೂ ನಿರ್ಧರಿಸಲಾಗಿದೆ. ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಒಟ್ಟು ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ದೇವೇಗೌಡ ಅವರ ವಜಾ, ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರು ಮತ್ತು ಎನ್ಡಿಎಯೇತರ ಪಕ್ಷಗಳ ಪ್ರಮುಖ ನಾಯಕರನ್ನು ಭೇಟಿ ಮಾಡಿ ಪಕ್ಷವನ್ನು ಸಂಘಟಿಸುವ ಹೊಣೆಯನ್ನು ಇಬ್ರಾಹಿಂ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.
ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರಾಗಿರುವ ಬಗ್ಗೆ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಓದಿ ಹೇಳಿದರು. ಇದಕ್ಕೆ ಇಬ್ರಾಹಿಂ ಅವರ ನೇತೃತ್ವದಲ್ಲಿ ನಿರ್ಣಯ ಅಂಗೀಕಾರ ಮಾಡಲಾಯಿತು. ಎನ್ಡಿಎ ಜತೆ ಜೆಡಿಎಸ್ ಕೈ ಜೋಡಿಸುವ ಬಗ್ಗೆ ದೇವೇಗೌಡ ಅವರಾಗಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನು ಪರಿಗಣಿಸಿಲ್ಲ. ಜಾತ್ಯಾತೀತ ನಿಲುವನ್ನು ಹೊಂದಿರುವ ಜೆಡಿಎಸ್ ಸಿದ್ಧಾಂತವನ್ನು ಗಾಳಿ ತೂರಲಾಗಿದೆ. ತಮಗೆ ಪಕ್ಷದ ಮುಖಂಡರ ಬೆಂಬಲ ಇರುವ ಕಾರಣ ದೇವೇಗೌಡ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.