ತುಪ್ಪವನ್ನು ಶತಮಾನಗಳಿಂದ ಭಾರತೀಯ ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸು ತ್ತಾರೆ. ಆದ್ರೆ ತುಪ್ಪದಿಂದ ತಯಾರಿಸಿದ ಚಹಾ ಈಗ ಟ್ರೆಂಡ್ ಆಗುತ್ತಿದೆ. ಏಕೆಂದರೆ ತುಪ್ಪದಿಂದ ತಯಾರಿಸಿದ ಕಾಫಿ ದೇಹದ ತೂಕವನ್ನು ಇಳಿಸುತ್ತದೆ ಎಂದು ಹೇಳಲಾಗುತ್ತದೆ.
ಹಾಗಾದರೆ ತುಪ್ಪದ ಚಹಾ ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
ತ್ರಾಣವನ್ನು ಹೆಚ್ಚಿಸುತ್ತದೆ : ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿದ್ದು ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ. ಬೆಳಿಗ್ಗೆ ತುಪ್ಪದ ಚಹಾವನ್ನು ಸೇವಿಸುವ ಮೂಲಕ ನೀವು ದಿನವಿಡೀ ಅಗತ್ಯವಿರುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ತುಪ್ಪದಲ್ಲಿರುವ ಕೊಬ್ಬಿನ ಅಂಶವನ್ನು ದೇಹವು ವೇಗವಾಗಿ ಹೀರಿಕೊಳ್ಳುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡದೆಯೇ ನಿಮ್ಮ ಸ್ನಾಯು ಮತ್ತು ಮೆದುಳಿಗೆ ಶಕ್ತಿಯನ್ನು ಪೂರೈಸುತ್ತದೆ.
ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ : ತುಪ್ಪದಲ್ಲಿ ಕಂಡು ಬರುವ ಬ್ಯೂಟಿರೇಟ್ ಎನ್ನುವ ಕೊಬ್ಬಿನಾಮ್ಲವು, ಕರುಳಿನ ಒಳಪದರವನ್ನು ರಕ್ಷಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದಲ್ಲದೆ ತುಪ್ಪದ ಚಹಾ ಮಾಡಲು ನೀವು ಹಾಲನ್ನು ಕೂಡ ಬಳಕೆ ಮಾಡಬಹುದು. ಹಾಲು ಮತ್ತು ತುಪ್ಪ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತವೆ.
ತೂಕ ನಷ್ಟಕ್ಕೆ ಸಹಕಾರಿ: ತುಪ್ಪ ಅಥವಾ ಇತರ ಆರೋಗ್ಯಕರ ಕೊಬ್ಬುಗಳನ್ನು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ತುಪ್ಪದ ಚಹಾವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದರಿಂದ, ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.
ಮುಟ್ಟಿನ ನೋವನ್ನು ನಿವಾರಿಸುತ್ತದೆ : ತುಪ್ಪದಲ್ಲಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿದ್ದು ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವು, ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಮುಟ್ಟಿನ ನೋವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ರೀತಿ ನಿಮ್ಮ ಚಹಾ ಅಥವಾ ಊಟಕ್ಕೆ ಒಂದು ಟೀಸ್ಪೂನ್ ತುಪ್ಪವನ್ನು ಸೇರಿಸುವ ಮೂಲಕ ನಿಯಮಿತ ಋತುಚಕ್ರವನ್ನು ಸಾಧಿಸಬಹುದು.
ಮಾನಸಿಕ ತೀಕ್ಷ್ಣತೆಯನ್ನು ಸುಧಾರಿಸುತ್ತದೆ: ತುಪ್ಪದ ಕೊಬ್ಬಿನಾಮ್ಲಗಳು ಮೆದುಳಿನ ಕೋಶಗಳನ್ನು ಪೋಷಿಸುವ ಮೂಲಕ ಅರಿವಿನ ಕಾರ್ಯ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತವೆ. ಹಾಗಾಗಿ ತುಪ್ಪದ ಚಹಾವು ನಿಮ್ಮ ಬೆಳಗಿನ ದಿನಚರಿಗೆ ಉತ್ತಮ ಸೇರ್ಪಡೆಯಾಗಿದೆ.