ಬೆಂಗಳೂರು: ಪ್ರಧಾನಿ ಮೋದಿ ಅವರಿಗೆ ಉಂಟಾದ ಭದ್ರತಾ ಲೋಪದ ಸಂಬಂಧ ಖರ್ಗೆ ಹೇಳಿಕೆಗೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸುಳ್ಳನ್ನು ಹೇಳುವವರಿಗೆ ಮಾತ್ರ ಅವಕಾಶ ಇದೆ. ಆ ಪಕ್ಷದಲ್ಲಿದ್ದ ನಾನು ಸತ್ಯ ಹೇಳಲು ಬಿಜೆಪಿಗೆ ಬಂದಿದ್ದೇನೆ.
ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಸುಳ್ಳು ಹೇಳಿದ್ದನ್ನು ನಾನು ನೋಡಿರಲಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಾಂಗ್ರೆಸ್‍ನವರು ಸುಳ್ಳು ಹೇಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಮಳೆ ಬಿದ್ದರೆ ಕಾಂಗ್ರೆಸ್ ಮುಖಂಡರು ಪಂಜಾಬ್‍ನಲ್ಲಿ ಕೊಡೆ ಹಿಡಿಯುತ್ತಾರೆ. ಇಂಥ ಭದ್ರತಾ ವಿಫಲತೆ ಯಾವತ್ತೂ ನಡೆದಿಲ್ಲ. ಕಾಂಗ್ರೆಸ್ ಇದರ ಬಗ್ಗೆ ಖುಷಿ ಪಡುತ್ತಿದೆ. ನಿಮಗೆ ಮೋದಿಯವರ ಬಗ್ಗೆ ದ್ವೇಷ ಇರಬಹುದು. ಆದರೆ ಈ ರೀತಿ ದ್ವೇಷ ಪಡುವುದು ಸರಿಯೇ? ಎಂದು ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
