ವಿಜಯನಗರ: ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸೋದು ನೋಡಿದ್ದೇವೆ. ಆದರೆ ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ತುಂಗಭದ್ರಾ ಜಲಾಶಯ ನಿರ್ಮಾಣಕ್ಕೆ ಮನೆ ಮಠ ತ್ಯಾಗ ಮಾಡಿದ ಜನ್ರಿಗೆ ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿದ್ದಾರೆ. ದೀಪದ ಕೆಳಗೆ ಕತ್ತಲೂ ಎನ್ನುವ ಹಾಗೆ ಜಲಾಶಯ ಪಕ್ಕದಲ್ಲಿದ್ರು ಇಲ್ಲಿನ ಜನ್ರಿಗೆ ನೀರಿಲ್ಲ, 400 ಕಿ.ಮೀ ದೂರದ ಪಾವಗಡಕ್ಕೆ ನೀರನ್ನ ಒಯ್ಯಲಾಗುತ್ತಿದೆ.
ಟಿಬಿ ಡ್ಯಾಂನಿಂದ 3 ಕಿ.ಮೀ ದೂರದ ಮರಿಯಮ್ಮನಹಳ್ಳಿ ಹೋಬಳಿಗೆ ನೀರಿಲ್ಲ, ಜಲಾಶಯ ನಿರ್ಮಿಸಿ 7 ದಶಕ ಕಳೆದ್ರು ಇಲ್ಲಿನ ಜನ್ರಿಗೆ ಕುಡಿಯುವ ನೀರಿನ ಭಾಗ್ಯ ಇಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಮರಿಯಮ್ಮನಹಳ್ಳಿ ಪ.ಪಂ ವ್ಯಾಪ್ತಿಗೆ 18 ವಾರ್ಡಗಳಲ್ಲಿಯೂ ನೀರಿಲ್ಲದೆ ಪರದಾಡುತ್ತಿದ್ದಾರೆ. 15 ರಿಂದ 20 ದಿನಗಳಿಗೊಮ್ಮ ಮಾತ್ರ ಸಿಹಿ ನೀರು ಬರ್ತಿವೆ.
ಅದು ಬಿಟ್ರೆ ಉಪ್ಪು ನೀರನ್ನೇ ನಚ್ಚಿಕೊಂಡು ನೂರಾರು ಕುಟುಂಬ ಜೀವನ ಸಾಗಿಸುತ್ತಿವೆ. ಕುಡಿಯೋದಕ್ಕೆ ನೀರಿಲ್ಲ ಸ್ವಾಮಿ… ತುಂಗಭದ್ರಾ ಜಲಾಶಯ ಕಟ್ಟಲು ಮನೆ – ಮಠ, ಆಸ್ತಿ ಕಳೆದುಕೊಂಡಿದ್ದೇವೆ. 18ಕ್ಕೆ 18 ವಾರ್ಡ್ ಗಳಲ್ಲಿ ಕುಡಿಯೋದಕ್ಕೆ ಸಮರ್ಪಕ ನೀರೇ ಇಲ್ಲ, ನಮ್ಮ ಗೋಳು ಯಾರೂ ಕೇಳೋದಿಲ್ಲ ರೀ.. ಕಾಂಗ್ರೆಸ್ ಸರ್ಕಾರ ಬಂದ್ರೂ ಇದೇ ಹಣೆಬರಹ, ಬಿಜೆಪಿ ಸರ್ಕಾರ ಬಂದ್ರೂ ಇದೇ ಗೋಳಾಟ.. 40 ವರ್ಷದಿಂದ ನಲ್ಲಿಗಳಲ್ಲಿ ನಿತ್ಯ ನೀರು ಬಂದಿದ್ದನ್ನ ನೋಡಿಯೇ ಇಲ್ಲ ಎಂದು ಸರ್ಕಾರಕ್ಕೆ ಮಹಿಳೆಯರು ಜಾಡಿಸಿದ್ದಾರೆ.