ಬೆಂಗಳೂರು:- ಐಜಿಎಸ್ಟಿ ಹಿಂಬಾಕಿ ಕಡಿತ ಮಾಡಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಸೀತಾರಾಮನ್ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಮುಖ್ಯಮಂತ್ರಿ, ‘ರಾಜ್ಯಕ್ಕೆ ಮುಂಗಡವಾಗಿ ಪಾವತಿಸಿದ್ದ ಐಜಿಎಸ್ಟಿಯಲ್ಲಿ ಹಿಂಬಾಕಿ ಇದೆ ಎಂಬ ಕಾರಣ ನೀಡಿ 2022ರ ಡಿಸೆಂಬರ್ 26ರಂದು ₹ 798.03 ಕೋಟಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಈ ರೀತಿ ರಾಜ್ಯಕ್ಕೆ ಸಂದಾಯವಾಗಬೇಕಾದ ತೆರಿಗೆ ಪಾಲನ್ನು ಬಾಕಿ ಹೆಸರಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ರಾಜ್ಯಗಳು ಆರ್ಥಿಕವಾಗಿ ಸಮಸ್ಯೆಗೆ ಸಿಲುಕುತ್ತವೆ’ ಎಂದಿದ್ದಾರೆ.
₹ 34,000 ಕೋಟಿಗಳಷ್ಟು ಮೊತ್ತದ ಐಜಿಎಸ್ಟಿ ಹಿಂಬಾಕಿ ಇದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹಿಂಬಾಕಿ ಉಳಿಯಲು ಕಾರಣಗಳೇನು? ಈ ರೀತಿ ಬೃಹತ್ ಮೊತ್ತದ ಹಿಂಬಾಕಿಯು ರಾಜ್ಯ ಸರ್ಕಾರಗಳ ಹಣಕಾಸು ನಿರ್ವಹಣೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಕಳವಳ ಮೂಡಿದೆ ಎಂದು ಹೇಳಿದ್ದಾರೆ.
ಐಜಿಎಸ್ಟಿ ಹಿಂಬಾಕಿಯ ಕುರಿತು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಿದೆ. ಈ ಕಾರಣದಿಂದ ಈಗ ಇರುವ ಒಟ್ಟು ಹಿಂಬಾಕಿ ಮತ್ತು ಅದನ್ನು ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವಲ್ಲಿ ಅನುಸರಿಸುತ್ತಿರುವ ಸೂತ್ರದ ಕುರಿತು ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.