ಕುರಿಸಾಕಾಣಿಕೆ ಇತ್ತೀಚೆಗೆ ಎಲ್ಲೆಡೆ ನಿಧಾನವಾಗಿ ಪ್ರಗತಿ ಕಾಣುತ್ತಿರುವ ಕಸುಬಾಗಿದೆ. ಹಸುವಿನ ರೀತಿಯೆ ಕುರಿಯ ಹಲವು ಉತ್ಪನ್ನಗಳು ಮಾನವನಿಗೆ ಬಹಳ ಉಪಯೋಗವಾಗುತ್ತಿದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಕುರಿಯ ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕುರಿ ಸಾಕಣೆ ಮಾಡುವುದು ಹೇಗೆ? : ದನಗಳಿಗೆ ಬೇಕಾಗಿರುವಂತೆ ಕುರಿಗಳನ್ನು ಸಾಕಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ ಹಾಗೂ ದನಕರುಗಳನ್ನು ಬೆಳೆಸುವಾಗ ತಗಲುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕುರಿ ಸಾಕಣೆ ಮಾಡಬಹುದಾಗಿದೆ. ರಾಜ್ಯದಲ್ಲಿ ಕುರಿಗಳನ್ನು ಅವುಗಳ ಮಾಂಸ, ಹಾಲು ಹಾಗೂ ತುಪ್ಪಳಕ್ಕಾಗಿ ಸಾಕಣೆ ಮಾಡಲಾಗುತ್ತದೆ.
ಪ್ರದೇಶದಲ್ಲಿ ಕುರಿ ಮಾಂಸ ಅಥವಾ ಮಟನ್ ಜನಪ್ರಿಯ ಮಾಂಸ ಭಕ್ಷ್ಯವಾಗಿದ್ದು, ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನೂ ಸಹ ಹೊಂದಿರುತ್ತದೆ. ಅಲ್ಲದೇ ಕುರಿ ಹಾಲಿನ ಉದ್ಯಮವು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಅದರಿಂದ ಹಲವಾರು ವೈವಿಧ್ಯಮಯ ಡೈರಿ ಉತ್ಪನ್ನಗಳನ್ನು ಸಹ ಉತ್ಪಾದಿಸಲಾಗುತ್ತದೆ. ಹಾಗಾಗಿ ಕುರಿಗಳಿಗೆ ಸ್ಥಳೀಯವಾಗಿ ಮತ್ತು ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ.
ಇದರಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಡೆಯಿಂದ ಅರ್ಹತೆ ಇರುವವರಿಗೆ 21 ಕುರಿಗಳಿಗೆ ಘಟಕ ನಿರ್ಮಿಸಲು ₹1,75,000 ರೂಪಾಯಿ ಹಣವನ್ನು ನೀಡಲಾಗುತ್ತದೆ. ಹೀಗೆ ಕುರಿಗಾಹಿಗಳಿಗೆ ಸಹಾಯ ಮಾಡುವುದು ಸರ್ಕಾರದ ಉದ್ದೇಶ ಆಗಿದೆ.
ರಾಜ್ಯದಲ್ಲಿ ಕುರಿ ಸಾಕಣೆಯ ಸವಾಲುಗಳೇನು? : ಸಾಕಾಣಿಕೆ ಉದ್ಯಮ ಆಕರ್ಷಕವಾಗಿದ್ದರೂ ಅದರಲ್ಲಿರುವ ಅದರದ್ದೇ ಆದ ಸವಾಲು ಇರುವುದು ಸಹಜ. ಕರ್ನಾಟಕದಲ್ಲಿ ಕುರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಇರುವ ಮುಖ್ಯ ಸವಾಲು ಎಂದರೆ ಸಾಕಲು ಯೋಗ್ಯವಾದ ಕುರಿ ತಳಿಯನ್ನು ಹುಡುಕುವುದು ಕಷ್ಟ. ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ಉದ್ಯಮಿಗಳು ಆರೋಗ್ಯಕರವಾದ ಹಾಗೂ ಗುಣಮಟ್ಟದ ಕುರಿ ತಳಿಗಳನ್ನು ಗುರುತಿಸಬಹುದಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ತಳಿ ಅಭಿವೃದ್ಧಿ ಕೇಂದ್ರಗಳು ಹಾಗೂ ಗುಣಮಟ್ಟದ ಕುರಿ ಫಾರ್ಮ್ ಗಳನ್ನು ಸ್ಥಾಪಿಸಿದೆ.
ಇದರ ಜೊತೆಗೆ ಸರ್ಕಾರವು ಕುರಿ ಸಾಕಾಣಿಕೆಯಲ್ಲಿ ತೊಡಗುವ ರೈತರಿಗೆ ವಿವಿಧ ಬಗೆಯ ಪ್ರೋತ್ಸಾಹದ ಬೆಂಬಲಗಳನ್ನೂ ಸಹ ಒದಗಿಸುತ್ತದೆ. ಇದು ತರಬೇತಿ ಕಾರ್ಯಕ್ರಮಗಳು, ಸಾಕಣೆ ತಂತ್ರಗಾರಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರವು ರೈತರಿಗೆ ಪ್ರೋತ್ಸಾಹ ಧನ ಹಾಗೂ ಸಬ್ಸಿಡಿಗಳನ್ನು ಸಹ ನೀಡಲಾಗುತ್ತದೆ ಎಂದು ಹೆಬ್ಬಾಳದ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಕುರಿ ಸಾಕಾಣಿಕೆ ಉದ್ಯಮವು ಒಂದು ಮಹತ್ವದ ಉದ್ಯಮವಾಗಿ ಗುರುತಿಸಿಕೊಂಡಿದೆ. ಈ ಉದ್ಯಮವು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಷ್ಟೇ ಅಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜೀವನೋಪಾಯದ ಮಾರ್ಗವಾಗಿಯೂ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? : ಈ ಉದ್ಯಮ ಆರಂಭಿಸುವುದಕ್ಕೂ ಮುನ್ನ ಈ ಕೆಳಗೆ ನೀಡಲಾದ ಅಂಶಗಳ ಬಗ್ಗೆ ಗಮನಹರಿಸುವುದು ಮಹತ್ತರವಾಗಿದೆ.
ಕುರಿಗಳ ಶೆಲ್ಟರ್ : ಕುರಿಗಳ ಮೇಲೆ ವಾತಾವರಣದ ಬದಲಾವಣೆಗಳು ಸಾಕಷ್ಟು ಪ್ರಭಾವ ಬೀರುವುದರಿಂದ ಕುರಿಗಳು ವಾಸಿಸಲು ಶೆಲ್ಟರ್ ನಿರ್ಮಾಣ ಪ್ರಮುಖವಾಗಿದೆ. ಹೀಗೆ ನಿರ್ಮಿಸಲಾಗುವ ಕುರಿಗಳ ವಾಸ ಸ್ಥಳವು ಒಣಗಿರಬೇಕು ಹಾಗೂ ಸ್ವಚ್ಛವಾಗಿರಬೇಕು. ಸಾಕಷ್ಟು ಗಾಳಿ – ಬೆಳಕು ಆಡುವಂತಿರಬೇಕು. ಇಲ್ಲಿ ಮುಖ್ಯವಾದ ವಿಷಯವೆಂದರೆ, ಅದು ಯಾವಾಗಲೂ ತೆರೆದಿರುವ ಅಥವಾ ಮುಚ್ಚಿರುವ ಸ್ಥಿತಿಯಲ್ಲಿರಬಾರದು. ಬದಲಾಗಿ ಭಾಗಶಃ ಮಾತ್ರ ಮುಚ್ಚಿರಬೇಕು. ಕುರಿ ಶೆಲ್ಟರ್ ಅಗಲವು 20 ಅಡಿ ಮೀರುವಂತಿರಬಾರದು. ಆದರೆ ಅದು ಎಷ್ಟು ಬೇಕಾದರೂ ಉದ್ದವಾಗಿರಬಹುದು. ಅಲ್ಲದೆ ಕುರಿಗಳಿಗೆ ಸದಾ ಕಾಲ ಕುಡಿಯಲು ನೀರಿನ ವ್ಯವಸ್ಥೆ ಇರಬೇಕು.
ಸಾಮಾನ್ಯವಾಗಿ ಎಲ್ಲರೂ ಉತ್ತಮ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡಲು ಬಯಸುತ್ತಾರೆ. ಪ್ರದೇಶಗಳಿಂದ ಪ್ರದೇಶಕ್ಕೆ ತಳಿಗಳು ಬದಲಾದ ಹಾಗೆ ಅವುಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತವೆ. ಹಾಗಾಗಿ ಕರ್ನಾಟಕದ ವಾತಾವರಣಕ್ಕೆ ಹೊಂದುವಂತೆ ಸೂಕ್ತವಾಗಿರುವ ತಳಿಗಳನ್ನು ಗುರುತಿಸಿ ಸಾಕುವುದು ಉತ್ತಮ. ಇದಕ್ಕಾಗಿ ಸಂಬಂಧಿಸಿದ ತಾಂತ್ರಿಕ ಅಧಿಕಾರಿಗಳಿಂದ ಸಲಹೆ ಪಡೆಯಬಹುದು. ಆರಂಭಿಕ ಹಂತದಲ್ಲಿ ಕರ್ನಾಟಕಕ್ಕೆ ಸ್ಥಳೀಯವಾಗಿರುವ ಕುರಿಗಳನ್ನು ಸಾಕುವುದು ಉತ್ತಮ.