ಬೆಂಗಳೂರು ;- ರಾಜ್ಯದ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಯಲ್ಲಿ ವರದಿ ಸಲ್ಲಿಸಿದ ಸರ್ಕಾರಿ ವಕೀಲರು, 2023 ರ ಜೂ.21ರ ವೇಳೆಗೆ ರಾಜ್ಯದಲ್ಲಿ ಜನವಸತಿ ಇರುವ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ. ಕೇವಲ ಐದು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಪಹಣಿ ನೋಂದಣಿ ಮಾಡಬೇಕಿದೆ. ಒತ್ತುವರಿಯಾಗಿರುವ ಎರಡು ಸ್ಮಶಾನಗಳ ಭೂಮಿಯನ್ನು ತೆರವುಗೊಳಿಸಬೇಕಿದೆ. ಈಗಾಗಲೇ ತೆರವುಗೊಳಿಸಿರುವ ನಾಲ್ಕು ಸ್ಮಶಾನಗಳ ಭೂಮಿಯನ್ನು ಸ್ಥಳೀಯ ಸಂಸ್ಥೆಯ ಸುಪರ್ದಿಗೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ವಾದ ಆಲಿಸಿದ ನ್ಯಾಯಪೀಠ, ಸ್ಮಶಾನ ಭೂಮಿ ಇಲ್ಲದ ಗ್ರಾಮದಲ್ಲಿ ಅಗತ್ಯ ಜಾಗ ಮಂಜೂರು ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಭೂಮಿ ಮಂಜೂರು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ತಪ್ಪಿದರೆ ಆ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿತು.
