ಹುಬ್ಬಳ್ಳಿ ಫೆ.22: ಇಂದು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಮಹಿಳೆಯರ ಬೈಕ್ ರ್ಯಾಲಿ ಮೂಲಕ ಸಂವಿಧಾನ ಜಾಗೃತಿ ಜಾಥಾಗೆ ಭವ್ಯ ಸ್ವಾಗತ ನೀಡಲಾಯಿತು. ಮುತ್ತೈದೆಯರು ಜಾಥಾ ವಾಹನಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ನೀಲಿ ಹಾಗೂ ಬಿಳಿ ಬಣ್ಣದ ಬಲೂನ್ ಗಳನ್ನು ಗಾಳಿ ಹಾರಿ ಬಿಡುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು.
ಮಹಿಳೆಯರ ಬೈಕ್ ರ್ಯಾಲಿ ಗ್ರಾಮಸ್ಥರ ಗಮನ ಸೆಳೆಯಿತು. ಚಕ್ಕಡಿ ಹಾಗೂ ಟ್ರ್ಯಾಕ್ಟರ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು. ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್, ಬಸವಣ್ಣನವರು, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಅನೇಕ ಮಹಾನ ಪುರುಷರ ವೇಷಭೂಷಣ ಧರಿಸಿ ಮಿಂಚಿದರು. ಕುಂಭಮೇಳ, ಬೈಕ್, ಎತ್ತಿನ ಬಂಡಿ, ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಕಣ್ಮನ ಸೆಳೆದವು.
ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ಲೆಜಿಮ್ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಸಿ. ಆರ್.ಅಂಬಿಗೇರ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಇತರರು ಉಪಸ್ಥಿತರಿದ್ದರು.