ಚಾಮರಾಜನಗರ:- ಹಿಂದಿನ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ದುರಂತ ನಡೆದು ಆ ಸರ್ಕಾರ ನಮ್ಮ ಗಂಡನ ಸಾವಿಗೆ ಕಾರಣವಾಯಿತು, ಈ ಸರ್ಕಾರ ನಮ್ಮ ಸಾವಿಗೆ ಕಾರಣವಾಗುವುದು ಬೇಡ. ನುಡಿದಂತೆ ನಡೆದುಕೊಂಡು ನಮಗೆ ಸರ್ಕಾರಿ ನೌಕರಿ ಕೊಡಲಿ ಎಂದು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತೆ ನಾಗರತ್ನ ನಗರದಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಚಾಮರಾಜನಗರದಲ್ಲಿ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ಥೆ ನಾಗರತ್ನ ನನ್ನ ಪತಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ನನಗೂ ಸೇರಿದಂತೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಯಾವ ಕುಟುಂಬದವರಿಗೂ ಯಾವುದೇ ಪರಿಹಾರ ದೊರೆತಿಲ್ಲ. ಸಿಎಂ ಅವರಿಗೂ ಮನವಿ ಮಾಡಿದ್ದೇವೆ. ರಾಹುಲ್ ಗಾಂಧಿ ಅವರನ್ನು ಬೇಟಿ ಮಾಡಿದ್ದೇವೆ. ಇಂದು ಜನತಾ ದರ್ಶನದಲ್ಲಿ ಸಚಿವ ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ದು:ಖಿತರಾಗಿ ತಿಳಿಸಿದರು.
ಆಕ್ಸಿಜನ್ ದುರಂತ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ನಮಗೆ ಸರ್ಕಾರಿ ಕೆಲಸವನ್ನು ಕೊಡುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಷ್ಟು ದಿನವಾಗಿದೆ. ಕೂಡಲೇ ನಮಗೆ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.