ಬೆಂಗಳೂರು: ಮಕ್ಕಳಿಗೆ ಲಸಿಕೆ ನೀಡಲು ಪೋಷಕರು ಸಹಕಾರ ನೀಡಬೇಕು ಎಂದು ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್ ಜೊತೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು, ಕೋವಿಡ್ ಎದುರಿಸಲು ಎಲ್ಲರೂ ಲಸಿಕೆ ಪಡೆಯುವುದು ಅಗತ್ಯ. ಹೀಗಾಗಿ ಉಚಿತವಾಗಿ ನೀಡುತ್ತಿರುವ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇನ್ನೂ ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಕೂಡ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಯಾವ ಮಗುವು ಕೂಡ ಕೋವಿಡ್ ಕಾರಣಕ್ಕೆ ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಅಪೂರ್ಣವಾಗಬಾರದು. ಹೀಗಾಗಿ ಲಸಿಕೆ ಪಡೆಯುವುದು ಅಗತ್ಯ. ಲಸಿಕೆ ಪಡೆದ ನಂತರ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಲು ಸಾಧ್ಯವಾಗಲಿದೆ ಎಂದು ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.
