ಬೆಂಗಳೂರು: ಮೇಕೆದಾಟು ಯೋಜನೆ ರಾಜಕೀಯ ಸ್ವರೂಪ ಪಡೆಯುತ್ತಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರ ಯಾವುದೇ ಕಾರಣಕ್ಕೂ ರಾಜಕೀಯವಾಗಬಾರದು. ಮೇಕೆದಾಟು ಹೋರಾಟ ಮಾಡಿದವರೇ ನಾವು. ಎರಡು ವರ್ಷದಿಂದ ಹೋರಾಟ ಮಾಡುತ್ತಿ ದ್ದೇವೆ. ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ.
ನಿಮ್ಮ ಸರ್ಕಾರ ಇದ್ದಾಗ ಅಡ್ಡಿ ಮಾಡಿದವರು ಯಾರು. ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಹಾಗೂ ಉನ್ನತ ಮಟ್ಟದ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವಂತೆ ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಮೇಕೆದಾಟು ಯೋಜನೆ ರಾಜಕೀಯ ಸ್ವರೂಪ ಪಡೆಯುತ್ತಿದೆ. ಬಿಜೆಪಿ ಲೋಕಸಭಾ ಸದಸ್ಯರು ಪ್ರಧಾನಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಬೇಕು. ಇಲ್ಲ ರಾಜೀನಾಮೆ ಕೊಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
