ಮುಂಬೈ: ಸಂಗಾತಿ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ವ್ಯಕ್ತಿಯೊಬ್ಬ ಲಿವ್-ಇನ್ ರಿಲೇಷನ್ಶಿಪ್ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಘಟನೆ ನಡೆದಿದೆ. ಮುಂಬೈನಲ್ಲಿ 46 ವಯಸ್ಸಿನ ವ್ಯಕ್ತಿ ವಿರುದ್ಧ 29ರ ಆತನ ಸಂಗಾತಿ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಳು. ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಆರೋಪಿ, ತಮ್ಮಿಬ್ಬರ ನಡುವಿನ ಲಿವ್-ಇನ್ ಸಂಬಂಧದ ಒಪ್ಪಂದ ಪತ್ರವನ್ನು ಕೋರ್ಟ್ಗೆ ಸಲ್ಲಿಸಿದ್ದ. ಇದನ್ನು ಪರಿಗಣಿಸಿದ ನ್ಯಾಯಾಲಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದೆ.
ಆದರೆ ಈ ದಾಖಲೆಯಲ್ಲಿರುವ ಸಹಿ ನನ್ನದಲ್ಲ ಎಂದು ಮಹಿಳೆ ಕೋರ್ಟ್ಗೆ ತಿಳಿಸಿದ್ದಾಳೆ. ಮಹಿಳೆ ವಯಸ್ಸಾದವರ ಆರೈಕೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಸರ್ಕಾರಿ ನೌಕರ. ಇದೀಗ, ಇವರಿಬ್ಬರ ಲಿವ್-ಇನ್ ಸಂಬಂಧದ ಒಪ್ಪಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನ ಸಂಗಾತಿ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
Teachers Day 2024: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
ಆರೋಪಿ ಪರ ವಾದ ಮಂಡಿಸಿದ ವಕೀಲರು ಇದನ್ನು ವಂಚನೆ ಪ್ರಕರಣ ಎಂದು ಕರೆದಿದ್ದಾರೆ. ಇಬ್ಬರ ನಡುವಿನ ಏಳು ಅಂಶಗಳ ಒಪ್ಪಂದದ ಪ್ರಕಾರ, ಅವರು ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಈ ಅವಧಿಯಲ್ಲಿ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ. ಶಾಂತಿಯುತವಾಗಿ ಇಬ್ಬರೂ ಒಟ್ಟಿಗೆ ಇರುವುದು ಎಂದು ಷರತ್ತು ಕೂಡ ಹಾಕಿಕೊಂಡಿರುವುದು ದಾಖಲೆಯಲ್ಲಿದೆ.
ವ್ಯಕ್ತಿಯಲ್ಲಿ ದುರ್ವರ್ತನೆ ಕಂಡುಬಂದರೆ ಯಾವುದೇ ಸಮಯದಲ್ಲಿ ಇಬ್ಬರೂ ಬೇರ್ಪಡಬಹುದು. ಮಹಿಳೆ ಸಂಬಂಧಿಕರು ಇವರಿಬ್ಬರು ಇರುವ ಮನೆಗೆ ಬರುವಂತಿಲ್ಲ. ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ ಅದಕ್ಕೆ ಸಂಗಾತಿ ಜವಾಬ್ದಾರನಲ್ಲ ಎಂದು ಹಲವು ಷರತ್ತುಗಳಿಗೆ ಒಪ್ಪಿ ಇಬ್ಬರೂ ಸಹಿ ಹಾಕಿರುವುದು ದಾಖಲೆಯಲ್ಲಿದೆ.