ಬೆಂಗಳೂರು:- ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳ ಆಸಕ್ತಿ ತೋರಿದ್ದು, ಡಾವೋಸ್ ಶೃಂಗಸಭೆಯಲ್ಲಿ 7 ಕಂಪನಿಗಳೊಂದಿಗೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ.
ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಏಳು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿವೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ. ವೆಬ್ ವೆರ್ಕ್ಸ್, ಲುಲು ಗ್ರೂಪ್, ಟಕೆಡಾ ಫಾರ್ಮಾಸ್ಯೂಟಿಕಲ್ಸ್ ಸೇರಿದಂತೆ ಏಳು ಸಂಸ್ಥೆಗಳು ರಾಜ್ಯ ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿರುವ ವಿಚಾರವನ್ನು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಇವುಗಳಿಂದ ಒಟ್ಟು 2.6 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಆಗಲಿದೆ ಎಂದು ಸಚಿವರು ವಿವರಿಸಿದ್ದಾರೆ. ಅಂದರೆ, ಸುಮಾರು 22,000 ಕೋಟಿ ರೂನಷ್ಟು ಹೂಡಿಕೆ ಕರ್ನಾಟಕಕ್ಕೆ ಹರಿದುಬರಲಿದೆ.
ಮೂರು ದಿನಗಳ ಶೃಂಗಸಭೆಯಲ್ಲಿ ಕರ್ನಾಟಕ ಅಮೋಘ 2.6 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಒಪ್ಪಂದಗಳನ್ನು ಗಿಟ್ಟಿಸಿಕೊಂಡಿದೆ.
ಈ ಸಂಬಂಧ ಸಚಿವ MB ಪಾಟೀಲ್ ಮಾತನಾಡಿ, ವೆಬ್ ವೆರ್ಕ್ಸ್, ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪ್ಯಾಕಾರ್ಡ್, ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ಬೇಸ್, ಟಕೆಡಾ ಫಾರ್ಮಾ, ಬಿಎಲ್ ಆಗ್ರೋ ಹಾಗೂ ಇನ್ನೂ ಹಲವು ಸಂಸ್ಥೆಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ ಎಂದರು.