ಹಲವಾರು ಕಡೆ ಸಲಾರ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ನೆಟ್ ಫ್ಲಿಕ್ಸ್ (OTT) ಸಲಾರ್ ಸಿನಿಮಾವನ್ನು ಖರೀದಿಸಿದ್ದು ಫೆಬ್ರವರಿ ಮೊದಲ ವಾರದಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಸಂಸ್ಥೆ ಹೇಳಿಕೊಳ್ಳದೇ ಇದ್ದರೂ, ಫೆಬ್ರವರಿ ಗ್ಯಾರಂಟಿ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದರ ಜೊತೆ ಜೊತೆಗೆ ಸಲಾರ್ ಸಿನಿಮಾ ಸ್ಪ್ಯಾನಿಷ್ (Spanish) ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿಗೂ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.