ಕೋಲ್ಕತ್ತಾ: ಭೀಕರ ರಸ್ತೆ ಅಪಘಾತಕ್ಕೀಡಾಗಿ 11 ತಿಂಗಳ ಕಾಲ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ.
ರಸ್ತೆ ಅಪಘಾತದ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದ ರಿಷಬ್ ಪಂತ್ ಗುರುವಾರ (ನ.9) ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ (Rishabh Pant Practice) ನಡೆಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್ನಲ್ಲಿಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕಾಲಿಗೆ ಯಾವುದೇ ಪ್ಯಾಡ್ಗಳನ್ನ ಧರಿಸದೇ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು, 2024ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ. ಬಳಿಕ ಮೈದಾನದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ರಿಷಬ್ ನಿಮ್ಮ ಫ್ಯೂಚರ್ ಇನ್ನಷ್ಟು ಬ್ರೈಟ್ ಆಗಲಿ, ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ನಿಮ್ಮ ಬರುವಿಕೆಯನ್ನು ಎದುರು ನೋಡುತ್ತೇವೆ ಎಂದು ನೆಟ್ಟಿಗರು ಕಾಮೆಂಟ್ನಲ್ಲಿ ಶುಭಕೋರಿದ್ದಾರೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ನಿರ್ದೇಶಕ ಸೌರವ್ ಗಂಗೂಲಿ ಸಹ ಉಪಸ್ಥಿತರಿದ್ದರು
2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು