ಬೆಂಗಳೂರು:- ಕರ್ನಾಟಕದ ರಾಜಕೀಯದಲ್ಲಿ ಸದಾ ಸುದ್ದಿಯಲ್ಲಿರುವುದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು. 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ಘೋಷಣೆ ಮಾಡಿತು. ಜನರು ಪಕ್ಷವನ್ನು ಬೆಂಬಲಿಸಿದರು. ಸ್ಪಷ್ಪ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. 5 ಗ್ಯಾರಂಟಿ ಯೋಜನೆಗಳನ್ನು ಈಗ ಸರ್ಕಾರ ಜಾರಿಗೊಳಿಸಿ, ನುಡಿದಂತೆ ನಡೆದಿದೆ.
ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿಯಿಂದಲೇ ಹೆಚ್ಚು ಸದ್ದು ಮಾಡಿತ್ತು. ಉಚಿತ ಬಸ್ ಟಿಕೆಟ್ ಫ್ರೀ, ಗೃಹಲಕ್ಷ್ಮಿ ಯೋಜನೆ ಸೇರಿ ಹಲವು ಯೋಜನೆ ಮಹಿಳೆಯರ ಗಮನ ಸೆಳೆದಿತ್ತು.
ಇನ್ನೂ ಇದೇ ಗ್ಯಾರಂಟಿ ವಿಚಾರ ಅಧಿವೇಶನದಲ್ಲಿ ಭಾರೀ ಸದ್ದು ಮಾಡಿತ್ತು. ಬಜೆಟ್ ಮೇಲಿನ ಚರ್ಚೆಯಲ್ಲಿ ಈ ಬಗ್ಗೆ ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಹಾಗೂ ಕಾಂಗ್ರೆಸ್ನ ಬಿ.ಆರ್.ಪಾಟೀಲ್ ಗಂಭೀರವಾಗಿಯೇ ವಾದ ಮಂಡಿಸಿದರು. ಮೊದಲು ಮಾತನಾಡಿದ ಕೃಷ್ಣಪ್ಪ, ”ಹೆಂಗಸರಿಗೆ ಮಾಸಿಕ 2 ಸಾವಿರ, ಓಡಾಟಕ್ಕೆ ಬಸ್ ಫ್ರೀ ಎಲ್ಲವನ್ನೂ ಕೊಟ್ಟಿದ್ದೀರಿ. ಇದಕ್ಕೆ ಕೊಡುತ್ತಿರುವುದು ಖಜಾನೆ ದುಡ್ಡು ಅಲ್ಲವೇ? ಹೆಂಗಸರಿಗೆ ಖುಷಿಪಡಿಸುವಂತೆ ಕುಡಿಯುವ ಗಂಡಸರಿಗೂ ವಾರಕ್ಕೆ ಎರಡು ಬಾಟಲಿ ಫ್ರೀ ಕೊಡಿ. ಸೊಸೈಟಿಗಳ ಮೂಲಕ ಹಂಚಿ,” ಎಂದು ಸಲಹೆ ನೀಡಿದರು.
ಚುನಾವಣೆಯಲ್ಲಿ ಗೆದ್ದು ಬಂದು ಇಂತಹ ವ್ಯವಸ್ಥೆ ಮಾಡಿ,” ಎಂದು ಸಚಿವ ಕೆ.ಜೆ.ಜಾರ್ಜ್ ಅವರು ಕೃಷ್ಣಪ್ಪ ಅವರಿಗೆ ಸಲಹೆ ಮಾಡಿದರೆ, ”ಈಗಲೇ ಈ ಸ್ಥಿತಿ ಫ್ರೀ ಮದ್ಯ ಕೊಟ್ಟರೆ ಏನಾಗಬಹುದು?,” ಎಂದು ಸ್ಪೀಕರ್ ಹಾಸ್ಯ ಮಾಡಿದರು. ತಮ್ಮ ವಾದವನ್ನು ಬಿಟ್ಟುಕೊಡದ ಕೃಷ್ಣಪ್ಪ, ”ಈಗೇನಾಗಿದೆ? ನಮ್ಮ 224 ಶಾಸಕರಲ್ಲಿ ಯಾರು ಕುಡಿಯಲ್ಲ ಹೇಳಿಬಿಡಲಿ,” ಎಂದು ಪ್ರಶ್ನಿಸಿದರು. ಈ ಮಾತಿಗೆ ಜೆಡಿಎಸ್ ಗುಂಪಿನ ಉಪನಾಯಕಿ ಶಾರದಾ ಪೂರ್ಯನಾಯಕ್, ”224 ಶಾಸಕರು ಎಂದು ನಮ್ಮನ್ನೂ ಸೇರಿಸಿಕೊಂಡು ಏಕೆ ಹೇಳುತ್ತೀರಿ,” ಎಂದು ಆಕ್ಷೇಪಿಸಿದರು.
ಆಡಳಿತಾರೂಢ ಕಾಂಗ್ರೆಸ್ನ ಬಿ.ಆರ್.ಪಾಟೀಲ್, ”ನನಗೆ ಸರ್ವಾಧಿಕಾರಿಯಾಗುವ ಅವಕಾಶ ಸಿಕ್ಕರೆ 2 ತಾಸಿನಲ್ಲೇ ಸಂಪೂರ್ಣ ಪಾನ ನಿಷೇಧ ಜಾರಿ ಮಾಡುತ್ತೇನೆ. ಪಾಪದ ಹಣದಿಂದ ಅಭಿವೃದ್ಧಿ ಮಾಡಬೇಕೇ?,” ಎಂದು ಹೇಳಿದರು.
ತಮ್ಮ ಈ ಮಾತಿಗೆ ಸಮರ್ಥನೆಯನ್ನೂ ನೀಡಿದ ಪಾಟೀಲ್, ”ನಮ್ಮ ಭಾಗದ ಮಹಿಳೆಯರು ಅನ್ನಭಾಗ್ಯ, ಗೃಹಲಕ್ಷ್ಮೀ ಸೇರಿ ಯಾವ ಫ್ರೀ ಭಾಗ್ಯವೂ ಬೇಡ ಸ್ವಾಮಿ.., ಮದ್ಯ ಮಾರಾಟ ಬಂದ್ ಮಾಡಿ ನಮ್ಮ ಸಂಸಾರ ಉಳಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸಿಎಂ ಸಲಹೆಗಾರನಾಗಿದ್ದ ನಾನು ಇದನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆ. ಆದರೆ, ಒಪ್ಪಿಲ್ಲ,” ಎಂದು ಬೇಸರ ತೋಡಿಕೊಂಡರು.