ಮುಂಬೈ: ಅದಾನಿ ಸಮೂಹದ (Adani Group) ವಿರುದ್ಧ ಹಿಂಡೆನ್ಬರ್ಗ್ ರಿಸರ್ಚ್ (Hindenburg Research) ಮಾಡಿದ ಆರೋಪ ಅಪ್ರಸ್ತುತ ಎಂದು ಅಮೆರಿಕದ ಸಂಸ್ಥೆ ತೀರ್ಮಾನಿಸಿದ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯ ಒಂದೇ ದಿನದಲ್ಲಿ ಭಾರೀ ಏರಿಕೆಯಾಗಿದೆ.
ನವೆಂಬರ್ ಮೊದಲ ವಾರದಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ (Colombo) ಬಂದರಿನಲ್ಲಿ ಕಂಟೈನರ್ ಟರ್ಮಿನಲ್ ಯೋಜನೆಗೆ (Container Terminal Project) ಅಮೆರಿಕದ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ (DFC) 553 ಮಿಲಿಯನ್ ಡಾಲರ್ (ಅಂದಾಜು 4,600 ಕೋಟಿ ರೂ.) ಹಣವನ್ನು ಅದಾನಿ ಪೋರ್ಟ್ ಎಸ್ಇಝಡ್(Adani Port Sez) ಸಾಲವಾಗಿ ನೀಡಿದೆ.
ಅದಾನಿ ಕಂಪನಿಗೆ ಭಾರೀ ಮೊತ್ತದ ಸಾಲ ನೀಡುವ ಮುನ್ನ ಡಿಎಫ್ಸಿ ಹಿಂಡೆನ್ಬರ್ಗ್ ಮಾಡಿದ ಎಲ್ಲಾ ಆರೋಪಗಳನ್ನು ಅಧ್ಯಯನ ಮಾಡಿತ್ತು. ಹಿಂಡೆನ್ಬರ್ಗ್ ಸಂಶೋಧನಾ ವರದಿಯ ಸತ್ಯಾಸತ್ಯತೆಯ ಬಳಿಕ ಈ ಆರೋಪ ಅಪ್ರಸ್ತುತ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಡಿಎಫ್ಸಿ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಬ್ಲೂಮ್ಬರ್ಗ್ ವರದಿ ಮಾಡಿದೆ. ಈ ವರದಿ ಪ್ರಕಟವಾದ ಬೆನ್ನಲ್ಲೇ ಮಂಗಳವಾರ ಒಂದೇ ದಿನ ಅದಾನಿ ಸಮೂಹದ ಕಂಪನಿಗಳ ಮೌಲ್ಯ 12.5 ಲಕ್ಷ ಕೋಟಿ ಏರಿಕೆಯಾಗಿದೆ.
ಅಮೆರಿಕ ಬೇರೆ ದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಹೊಸದೆನಲ್ಲ. ಆದರೆ ಏಷ್ಯಾದಲ್ಲಿ ಚೀನಾ (China) ಪ್ರಭಾವ ಕಡಿಮೆ ಮಾಡಲು ಅಮೆರಿಕ ಮುಂದಾಗುತ್ತಿದೆ. ಇದರ ಭಾಗವಾಗಿ ಭಾರತದ ಅದಾನಿ ಕಂಪನಿಯ ಮೇಲೆ ಹೂಡಿಕೆ ಮಾಡುತ್ತಿದೆ.
ಅದಾನಿ ಕಂಪನಿಗಳ ಷೇರು ಜಿಗಿತ – ಯಾವುದು ಎಷ್ಟು ಏರಿಕೆ?
ಗ್ರೀನ್ – 224.75(20%)
ಟ್ರಾನ್ಸ್ಮಿಷನ್ – 180.71(19.99%)
ಗ್ಯಾಸ್ – 45.61(19.88%)
ಎಂಟರ್ಪ್ರೈಸಸ್ – 428.16(16.91%)
ಪವರ್ -73.45(15.80%)
ಪೋರ್ಟ್ಸ್ ಎಸ್ಇಝಡ್ -134.46(15.30%)
ವಿಲ್ಮರ್ – 34.40(9.93%)
ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್ಬರ್ಗ್ ಆರೋಪಿಸಿತ್ತು. ಈ ವರ್ಷದ ಜನವರಿ 24 ರಂದು ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಇಳಿಕೆಯಾಗಿ ಗೌತಮ್ ಅದಾನಿ ಅವರ ಸಂಪತ್ತು ಕರಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ (Gautam Adani) 10 ದಿನದಲ್ಲೇ 25ನೇ ಸ್ಥಾನಕ್ಕೆ ಕುಸಿದಿದ್ದರು.