ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಾಲು ರಜೆಗಳನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಕರ್ನಾಟಕದಾದ್ಯಂತ 22 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ವಿಶೇಷ ರೈಲುಗಳ ವೇಳಾಪಟ್ಟಿ, ಪ್ರಯಾಣದ ಸಮಯ ಇತ್ಯಾದಿ ವಿವರಗಳನ್ನೂ ಹಂಚಿಕೊಂಡಿದೆ.
ರೈಲು ಸಂಖ್ಯೆ 06589/06590 SMVT ಬೆಂಗಳೂರು- ಕಲಬುರಗಿ- SMVT ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲನ್ನು ಪ್ರತಿ ದಿಕ್ಕಿನಲ್ಲಿ 03 ಟ್ರಿಪ್ ಓಡಿಸಲು ನಿರ್ಧಾರ ಮಾಡಲಾಗಿದೆ. ರೈಲು ಸಂಖ್ಯೆ 06589 SMVT ಬೆಂಗಳೂರು-ಕಲಬುರಗಿ ಎಕ್ಸ್ಪ್ರೆಸ್ ವಿಶೇಷ ರೈಲು SMVT ಬೆಂಗಳೂರಿನಿಂದ ಸೆಪ್ಟೆಂಬರ್ 5, 6, 7 ರಂದು ರಾತ್ರಿ 9.15 ಕ್ಕೆ ಹೊರಟು ಮರುದಿನ ಬೆಳಗ್ಗೆ 07.40 ಕ್ಕೆ ಕಲಬುರಗಿ ತಲುಪಲಿದೆ.
ಸೆಪ್ಟೆಂಬರ್ 5 ರಿಂದ 7 ರವರೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರ ನಡೆಸಲಿದೆ. ಬೆಂಗಳೂರು ಕಲಬುರಗಿ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:40 ಕ್ಕೆ ಕಲಬುರಗಿಗೆ ತಲುಪಲಿದೆ. ಅದೇ ರೀತಿ, ಸೆಪ್ಟೆಂಬರ್ 6 ರಿಂದ 8 ರವರೆಗೆ, ಕಲಬುರಗಿಯಿಂದ ಹಿಂತಿರುಗುವ ರೈಲು ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 8:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಈ ವಿಶೇಷ ರೈಲುಗಳು ಯಲಹಂಕ, ಧರ್ಮವರಂ ಅನಂತಪುರಂ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿವೆ.