ಬೆಂಗಳೂರು: ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಕರ್ನಾಟಕದ ವಿವಿಧ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಿಗೆ ಹೆಚ್ಚುವರಿ 1500 ಬಸ್ಗಳನ್ನು ನಿಯೋಜಿಸಿದೆ. ಬೆಂಗಳೂರಿನಿಂದ ಸಾಮಾನ್ಯ ವೇಳಾಪಟ್ಟಿಯನ್ನು ಹೊರತುಪಡಿಸಿ ಅನೇಕ ಸ್ಥಳಗಳಿಗೆ ಹೆಚ್ಚುವರಿ 1,500 ವಿಶೇಷ ಬಸ್ಗಳನ್ನು ಕೆಎಸ್ಆರ್ಟಿಸಿ ಘೋಷಿಸಿದೆ.
ವಿಶೇಷ ಹಾಗೂ ಹೆಚ್ಚುವರಿ ಬಸ್ಗಳ ಪ್ರಯಾಣದ ಸಮಯ ಹಾಗೂ ದರದ ಬಗ್ಗೆ ಕೆಎಸ್ಆರ್ಟಿಸಿ ಮೊಬೈಲ್ ಆ್ಯಪ್ ಹಾಗೂ https://www.ksrtc.in/ ವೆಬ್ಸೈಟ್ ಮೂಲಕ ಸಂಸ್ಥೆ ಮಾಹಿತಿ ನೀಡಲಿದೆ. ಇವುಗಳ ಮೂಲಕವೇ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಕರ್ನಾಟಕದಾದ್ಯಂತ ಬಸ್ ನಿಲ್ದಾಣಗಳಲ್ಲಿನ ಹಾಗೂ ನೆರೆ ರಾಜ್ಯಗಳ ಕೆಎಸ್ಆರ್ಟಿಸಿ ಕೌಂಟರ್ಗಳ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹಲವು ಪ್ರಮುಖ ಸ್ಥಳಗಳಿಗೆ ಸಂಚರಿಸಲಿವೆ. ತಿರುಪತಿ, ವಿಜಯವಾಡ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ವಿಜಯಪುರ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮತ್ತು ಹೈದರಾಬಾದ್ ಸೇರಿದಂತೆ ಇತರೆ ಕಡೆಗಳಿಗೆ ಕೆಎಸ್ಆರ್ಟಿಸಿ ವಿಶೇಷ ಬಸ್ಗಳು ಸಂಚರಿಸಲಿದೆ.
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಪಿರಿಯಾಪಟ್ಟಣ, ವಿರಾಜಪೇಟೆ, ಮೈಸೂರು, ಹುಣಸೂರು, ಕುಶಾಲನಗರ ಮತ್ತು ಮಡಿಕೇರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.