ಬೆಂಗಳೂರು:- ಗಣೇಶ ದೇವರೇ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಟ್ಯಂತರ ಜನ ಅನುಯಾಯಿಗಳನ್ನು ಹೊಂದಿರುವ ಪಂಡಿತಾರಾಧ್ಯ ಶ್ರೀಗಳು ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕನ ಬಗ್ಗೆ, ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿದ್ದು, ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಕುಂದುಂಟಾಗಿದೆ. ಸಾರ್ವಜನಿಕವಾಗಿ ಹೀಗೆ ಹಿಂದೂ ದೇವರ ವ್ಯಂಗ್ಯದ ಹಿಂದೆ ಸಮಾಜದ ಸಾಮರಸ್ಯಕ್ಕೆ ಹಾಳು ಮಾಡುವ ಕುತಂತ್ರ ಅಡಗಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.