ಕಣ್ಣಿನ ಸುತ್ತ ಕೆಂಪು ಬಣ್ಣ,,ಕಡುಗಪ್ಪು ದಪ್ಪ ಹುಬ್ಬುಗಳು, ಕತ್ತಲೇ ಬಟ್ಟೆಯಾದಂಥ ನಿಲುವಂಗಿ, ಕೆಂಪು ಚೂಪು ಕೋಡುಗಳು ಒಂದೆಡೆ ಇಷ್ಟು ಭೀಕರ ರೂಪದ ರಕ್ಕಸರ ಗುಂಪು…. ಇನ್ನೊಂದೆಡೆ ಶಾಂತ ಭಾವವನ್ನು ಸೂಸುವ, ಬಿಳಿಯುಡುಗೆಯಲ್ಲಿ ನಗುನಗುತ್ತ ನಿಂತಿರುವವ, ನೆತ್ತಿಯ ಮೇಲೂ ಬಿಳಿಯಾದ ಹೂತೊಟ್ಟ ಗಂಧರ್ವರು.
ಯಾವುದಿದು ಗಂಧರ್ವ-ರಕ್ಕಸರ ಮುಖಾಮುಖಿ? ಈ ಪ್ರಶ್ನೆಗೆ ಉತ್ತರ JioCinemaಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇದೆ. ‘ಬಿಗ್ಬಾಸ್ ಮನೆ ಈ ಕ್ಷಣದಿಂದ ಬಿಗ್ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗುತ್ತದೆ. ಈ ಲೋಕದಲ್ಲಿ ಗಂದರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ’ ಎಂದು ಬಿಗ್ಬಾಸ್ ಘೋಷಿಸಿದಾಗ ಎಲ್ಲ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ.
ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ.
ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್ರೂಮಿನಲ್ಲಿ ಬಟ್ಟೆಗಳನ್ನೆಲ್ಲ ಚೆಲ್ಲಿ ಕಿರುಚಾಡುತ್ತ ಕುಣಿದಾಡಿದ್ದಾರೆ. ಸಂಗೀತಾ, ವಿನಯ್ ತಮ್ಮ ಹಿಂದೆ ಕುಪ್ಪಳಿಸಿಕೊಂಡು ಬರುತ್ತಿರಬೇಕು ಎಂದು ಅಪ್ಪಣೆ ಹೊರಡಿಸಿದ್ದಾರೆ. ನಮ್ರತಾ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ರಕ್ಕಸ ಗುಂಪು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣಗಿದೆ ಗಂಧರ್ವರ ತಂಡ. ಹಾಗಂತ ಅವರ ಮನಸ್ಸೇನೂ ತಣ್ಣಗಿಲ್ಲ. ಅದರ ಸೂಚಕವಾಗಿ, ‘ನಾನು ನನ್ನ ಪಾತ್ರದಿಂದ ಹೊರಗೆ ಬಂದರೆ ವಿಷಯವೇ ಬೇರೆ. ಪಾಪ ಅವರು, ಬೇಜಾರಗುತ್ತಿದೆ ಅವರನ್ನು ನೆನಪಿಸಿಕೊಂಡರೆ ಎಂದು ವಿನಯ್ ಹೇಳುತ್ತಿದ್ದಾರೆ.
ಈ ವಿಚಿತ್ರ ಪ್ರಪಂಚವನ್ನು ಕ್ಯಾಪ್ಟನ್ ಸ್ನೇಹಿತ್ ಉಸ್ತುವಾರಿ ಮಾಡುತ್ತಿದ್ದಾರೆ. ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಇದ್ದರೆ ಅದು ಹೇಗಿರುತ್ತದೆ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್ಬಾಸ್ ನೋಡಬೇಕು ಅಷ್ಟೆ.