ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮುನಿಸು ಇನ್ನೂ ಶಮನವಾಗಿಲ್ಲ. ಒಂದು ಕುಟುಂಬದಲ್ಲಿ ಹುಟ್ಟಿ ಬೆಳೆದ ಇಬ್ಬರು ಸಹೋದರರು ರಾಜಕೀಯ ವೈರತ್ವ, ಕುಟುಂಬದ ಮದುವೆಯಲ್ಲೂ ಮುಂದುವರಿದಿದೆ. ನಿನ್ನೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಹಿರಿಯ ಮಗ ಸಂದೀಪ್ ರೆಡ್ಡಿ ಉದ್ಯಮಿ ಸುಧಾಕರ ರೆಡ್ಡಿ ಮಗಳು ದಿವ್ಯ ಜೊತೆಗೆ ಅದ್ದೂರಿಯಾಗಿ ಮದುವೆ ಸಮಾರಂಭ ಆಂಧ್ರದ ನೆಲ್ಲೂರುನಲ್ಲಿ ನಡೆದಿದೆ.
ಈ ಒಂದು ಮದುವೆ ಸಮಾರಂಭಕ್ಕೆ ರಾಜಕಾರಣಿಗಳು ಪಕ್ಷ ಭೇದ ಮರೆತು ಭಾಗಿಯಾಗಿದ್ದರು. ಆದರೆ ಜನಾರ್ದನ ರೆಡ್ಡಿ ಕುಟುಂಬ ಮಾತ್ರ ಮದುವೆ ಸಮಾರಂಭದಿಂದ ದೂರ ಉಳಿದಿದೆ. ಇನ್ನು ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ ಸ್ವಂತ ಅಣ್ಣನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸಿದ್ದರು.
ಸೋಮಶೇಖರ್ ರೆಡ್ಡಿ ಸೋಲಿಗೆ ಪರೋಕ್ಷವಾಗಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕಾರಣರಾಗಿದ್ದರು. ಜನಾರ್ದನ ರೆಡ್ಡಿ ಪಕ್ಷ ಕಟ್ಟಿದಾಗಿನಿಂದಲೂ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಜೋರಾಗಿಯೇ ಇತ್ತು. ಇದೀಗ ಸೋಮಶೇಖರ್ ರೆಡ್ಡಿ ಮಗನ ಮದುವೆಗೆ ಜನಾರ್ದನ ರೆಡ್ಡಿ ಕುಟುಂಬ ಗೈರಾಗಿದೆ. ರಾಜಕೀಯ ವೈರತ್ವದ ಜೊತೆಗೆ ವೈಯಕ್ತಿಕ ಸಂಬಂಧದಿಂದಲೂ ರೆಡ್ಡಿ ಸಹೋದರರು ದೂರ ಉಳಿದಿದ್ದಾರೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭಾರತ್ ರೆಡ್ಡಿ ಗೆಲುವು ಸಾಧಿಸಿದ್ದರು.