ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattacharya) ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಪುರುಷನಾಗಿ ರೂಪಾಂತರಗೊಳ್ಳಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೇ ತಮ್ಮ ಹೆಸರನ್ನ ʻಸುಚೇತನ್ʼ ಎಂದೂ ಬಸಲಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಲಿಂಗಪರಿವರ್ತನೆಗೆ ಒಳಗಾಗಲು ಸಕಲ ಸಿದ್ಧತೆ ನಡೆಸಿದ್ದು, ಅಗತ್ಯ ಪ್ರಮಾಣ ಪತ್ರಗಳನ್ನ ಪಡೆದುಕೊಳ್ಳಲು ಮನೋವೈದ್ಯರನ್ನ (Psychiatrists) ಸಂಪರ್ಕಿಸುತ್ತಿದ್ದಾರೆ. ಜೊತೆಗೆ ಪರಿಣಿತರಿಂದ ಸೂಕ್ತ ಸಲಹೆಗಳನ್ನೂ ಅವರು ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್‌ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಸುಚೇತನಾ ತಮ್ಮನ್ನ ಒಬ್ಬ ಪುರುಷ ಎಂದು ಗುರುತಿಸಿಕೊಂಡಿದ್ದರು. ದೈಹಿಕವಾಗಿಯೂ ಪುರುಷನ ಹಾಗೆ ಕಾಣಿಸಿಕೊಳ್ಳಲು ಬಯಸಿರುವುದಾಗಿ ಹೇಳಿಕೊಂಡಿದ್ದರು.

ಈ ಕುರಿತು ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ನನ್ನ ಎಲ್‌ಜಿಬಿಟಿಕ್ಯೂ (LGBTQ) ಚಳವಳಿಯ ಭಾಗವಾಗಿ ಇದನ್ನು ಮಾಡ್ತಿದ್ದೇನೆ. ನನ್ನ ಪೋಷಕರು ಗುರುತಾಗಲಿ, ಕುಟುಂಬದ ಐಡೆಂಟಿಟಿಯಾಗಲಿ ಇಲ್ಲಿ ದೊಡ್ಡ ವಿಷಯವಲ್ಲ. ಲಿಂಗ ಪರಿವರ್ತನೆ ಆಗುವ ಮೂಲಕ ಪ್ರತಿದಿನ ಎದುರಿಸುವ ಸಾಮಾಜಿಕ ಕಿರುಕುಳ ತಡೆಯಲು ನಾನು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ನಾನೀಗ ವಯಸ್ಕಳಾಗಿದ್ದೇನೆ, ನನಗೆ ಈಗ 41 ವರ್ಷ ವಯಸ್ಸು. ಹೀಗಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳ ನ್ನೂ ನಾನೇ ತೆಗೆದುಕೊಳ್ಳಬಹುದು, ಅದೇ ರೀತಿಯಲ್ಲಿ ಈ ನಿರ್ಧಾರ ಕೂಡ ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ವಿಚಾರಕ್ಕೆ ದಯವಿಟ್ಟು ನನ್ನ ಪೋಷಕರನ್ನು ಎಳೆದು ತರಬೇಡಿ. ಯಾರು ತಮ್ಮನ್ನು ಮಾನಸಿಕವಾಗಿ ಪುರುಷ ಎಂದು ಪರಿಗಣಿಸುತ್ತಾರೋ, ಅವರು ವಾಸ್ತವವಾಗಿಯೂ ಪುರುಷರೇ ಆಗಿರುತ್ತಾರೆ. ನನ್ನನ್ನು ನಾನು ಮಾನಸಿಕವಾಗಿ ಪುರುಷ ಎಂದೇ ಪರಿಗಣಿಸಿದ್ದೇನೆ. ಅದನ್ನು ದೈಹಿಕವಾಗಿ ಕೂಡ ಸಾಧ್ಯವಾಗಿಸಲು ಬಯಸಿದ್ದೇನೆ. ನನ್ನ ತಂದೆ ಬಾಲ್ಯದಿಂದಲೂ ನನ್ನ ನಿರ್ಧಾರಗಳಿಗೆ ಸಹಕರಿಸುತ್ತಲೇ ಬಂದಿದ್ದಾರೆ. ಈಗಲೂ ಅವರು ನನ್ನ ನಿರ್ಧಾರವನ್ನು ಒಪ್ಪುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕಾಂಗಿಯಾಗಿ ಹೋರಾಟ ಮಾಡ್ತೀನಿ:
ಯಾರೂ ಏನಾದರೂ ಹೇಳಿಕೊಳ್ಳಲಿ, ನಾನಂತೂ ನಿರ್ಧಾರ ತೆಗೆದುಕೊಂಡಿದ್ದೇನೆ. ಅದಕ್ಕಾಗಿ ಹೋರಾಟ ನಡೆಸುವ ಧೈರ್ಯವೂ ನನಗಿದೆ. ಪ್ರತಿಯೊಬ್ಬರ ಪ್ರಶ್ನೆಗೆ ಉತ್ತರ ಕೊಡೋದಕ್ಕೂ ನಾನೂ ಸಿದ್ಧವಾಗಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ, ಏಕಾಂಗಿಯಾಗಿ ಹೋರಾಡಲು ಇಚ್ಛಿಸುತ್ತೇನೆ. ನನಗೆ ಬಾಲ್ಯದಿಂದಲೂ ಈ ದೃಷ್ಟಿಕೋನವಿತ್ತು. ಅನೇಕ ಜನರು ಇದನ್ನು ಬೆಂಬಲಿಸಿದ್ದಾರೆ, ಮತ್ತೂ ಕೆಲವರು ಲೇವಡಿ ಮಾಡಿದ್ದಾರೆ. ನಾನು ಒಬ್ಬ ಟ್ರಾನ್ಸ್ ಮ್ಯಾನ್. ದೈಹಿಕವಾಗಿಯೂ ನಾನು ಹಾಗೇ ಆಗಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
