ಬೆಂಗಳೂರು: ಟೀಮ್ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ ಆಡಿದ 95 ಪಂದ್ಯಗಳಿಂದ ಒಟ್ಟು 490 ವಿಕೆಟ್ಗಳನ್ನು ಪಡೆಯುವ ಮೂಲಕ ದಿಗ್ಗಜ ಬೌಲರ್ ಆಗಿ ಬೆಳೆದುನಿಂತಿದ್ದಾರೆ. ಆದರೆ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅಂಥದ್ದೇ ಛಾಪು ಮೂಡಿಸುವಲ್ಲಿ ಅಶ್ವಿನ್ ವಿಫಲರಾಗಿದ್ದಾರೆ. 37 ವರ್ಷದ ಅನುಭವಿ ಆಟಗಾರ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು.
ಲೀಗ್ ಹಂತದಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಡಿದ್ದ ಅಶ್ವಿನ್ 34 ರನ್ ಕೊಟ್ಟು 1 ವಿಕೆಟ್ ಪಡೆದಿದ್ದರು. ಬಳಿಕ ಅವರನ್ನು ಯಾವುದೇ ಪಂದ್ಯಕ್ಕೆ ಆಯ್ಕೆ ಮಾಡಲಾಗಲಿಲ್ಲ.
“ಅಶ್ವಿನ್ ಒಬ್ಬ ದಿಗ್ಗಜ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೂ ಅವರು ಒಡಿಐ ಮತ್ತು ಟಿ20-ಐ ಕ್ರಿಕೆಟ್ ಆಡಲು ನಾಲಾಯಕ್ ಅವರ ಬ್ಯಾಟಿಂಗ್ ಮೂಲಕ ಕೊಡುಗೆ ಏನಿದೆ? ಒಬ್ಬ ಫೀಲ್ಡರ್ ಆಗಿ ಅವರು ಎಷ್ಟು ಪರಿಣಾಮಕಾರಿ? ಟೆಸ್ಟ್ ತಂಡದಲ್ಲಿ ಖಂಡಿತಾ ಅಶ್ವಿನ್ ಆಡಬೇಕು.ಆದರೆ, ಭಾರತದ ಪರ ವೈಟ್ಬಾಲ್ ಕ್ರಿಕೆಟ್ ಆಡಲು ಅವರು ನಾಲಾಯಕ್. ಅವರಿಗೆ ಸ್ಥಾನ ಕೊಡುವುದು ಯೋಗ್ಯವಲ್ಲ,” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
2017ರಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಸೋಲನುಭವಿಸುವ ವರೆಗೂ ಆರ್ ಅಶ್ವಿನ್ ವೈಟ್ಬಾಲ್ ಕ್ರಿಕೆಟ್ನಲ್ಲೂ ತಂಡಕ್ಕೆ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದರು.