ಮೈಸೂರು: ಕಾನೂನಿನ ಅರಿವು ಇಲ್ಲದಿದ್ದರೆ ಎಲ್ಲರೂ ಕತ್ತಲೆ ಸಮಾಜದಲ್ಲಿ ಬದುಕಬೇಕಾಗುತ್ತದೆ. ಇದಕ್ಕಾಗಿ ಜನಾಂದೋಲನ ನಡೆಸುವ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ- ಕಾನೂನು, ಮಾನವ ಹಕ್ಕುಗಳ ಮಾಹಿತಿ ವಿಭಾಗದ ವತಿಯಿಂದ ಆಯೋಜಿಸಿಲಾಗಿದ್ದ ಕೆಪಿಸಿಸಿ ಕಾನೂನು ವಿಭಾಗ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಮತ್ತು ಅಭಿನಂದನಾ ಸಭಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಕಾನೂನನ್ನು ಅನುಸರಿಸುವುದು, ಪಾಲನೆ ಮಾಡುವುದು ಮತ್ತು ಕಾನೂನಾತ್ಮಕಾವಾಗಿ ನಡೆದುಕೊಳ್ಳುವುದು ಪ್ರಜಾಸತ್ತಾತ್ಮಕ ಪರವಾಗಿರುವುದು ಎಂದರ್ಥ. ಯಾರಾದರೂ ಕಾನೂನು ಪರವಾಗಿದ್ದಾರೆ ಎಂದರೆ ಅವರು ಜನರ ಹಾಗೂ ಅಭಿವೃದ್ಧಿ ಪರವಾಗಿಯೇ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಂಡು ಗೌರವಿಸಬೇಕು ಎಂದು ಸಲಹೆ ನೀಡಿದರು.

ಕಾನೂನಿನ ಅರಿವು ಸಮಾಜದ ಆರೋಗ್ಯಕ್ಕೆ ಬಹಳ ಅಗತ್ಯವಾಗಿದೆ. ರಾಷ್ಟ್ರಮಟ್ಟದ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂವಿಧಾನದ ವಿರುದ್ಧವಾಗಿ ಸಾಗುವವರನ್ನು ಸರಿದಾರಿಗೆ ತರಲು ಕಾನೂನು ಪ್ರಬಲ ಅಸ್ತ್ರವಾಗಿದೆ. ಜನರ ಆಡಳಿತವೇ ಪ್ರಜಾಸತ್ತಾತ್ಮಕವಾಗಿದ್ದು, ಈ ಆಡಳಿತ ಉತ್ತಮವಾಗಿ ನಡೆಸಬೇಕಾದರೆ ಕಾನೂನು ಚೌಕಟ್ಟಿನಲ್ಲೇ ಎಲ್ಲರೂ ನಡೆಯಬೇಕು ಎಂದು ಪ್ರತಿಪಾದಿಸಿದರು.
