ಬಾಲಕಿಯೋರ್ವಳ ಸಮಯಪ್ರಜ್ಞೆಯಿಂದಾಗಿ ಭಾರೀ ಅಗ್ನಿ ಅವಘಡವೊಂದು ತಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ನಗರದ ಎಸ್ಪಿ ಕಚೇರಿ ಸಮೀಪ ಎಂಜಿ ರಸ್ತೆಯಲ್ಲಿರುವ ಇಸ್ಮಾಯಿಲ್ ದೊಡ್ಮನಿ ಎಂಬುವವರ ಮನೆಯ ಗೋಡೌನ್ ನಲ್ಲಿ ಬೆಡ್‌ಗೆ ಬಳಸುವ ಸುಮಾರು 50 ಸಾವಿರಕ್ಕೂ ಅಧಿಕ ಮೌಲ್ಯದ ಹತ್ತಿಯನ್ನ ದಾಸ್ತಾನು ಮಾಡಿಡಲಾಗಿತ್ತು. ಗೋಡೌನ್ ನ ಸಮೀಪದಲ್ಲೇ ವೆಲ್ಡಿಂಗ್ ಕೆಲಸ ಮಾಡಿದ್ದ ಕೆಲಸಗಾರರು, ರಾತ್ರಿ ಸುಮಾರು 10 ಗಂಟೆಯ ಬಳಿಕ ಕೆಲಸ ಮುಗಿಸಿ ವಾಪಸ್ಸಾಗಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವೆಲ್ಡಿಂಗ್ ಮಾಡುವ ಕಿಡಿ ಹತ್ತಿಗೆ ತಾಗಿದೆ ಎನ್ನಲಾಗಿದೆ. ಇದರಿಂದಾಗಿ ಹತ್ತಿಗೆ ಒಂದೇ ಸಮನೆ ಬೆಂಕಿ ಹೊತ್ತಿಕೊಂಡು ಗೋಡೌನ್ ನಿಂದ ಹೊಗೆ ಬರಲಾರಂಭಿಸಿದೆ. ಈ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ 12 ವರ್ಷ ವಯಸ್ಸಿನ ಪ್ರಜನ್ಯಾ ನಾಯ್ಕ ಕದಂ ಎನ್ನುವ ಬಾಲಕಿ ಮನೆಯ ಪಾಠಗಳನ್ನು ಮುಗಿಸಿ ಕೋಣೆಗೆ ಮಲಗಲು ತೆರಳುತ್ತಿದ್ದ ವೇಳೆ ಪಕ್ಕದ ಮನೆಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿದ್ದಾಳೆ. ಕೂಡಲೇ ಈ ಬಗ್ಗೆ ತನ್ನ ತಾಯಿಗೆ ಮಾಹಿತಿ ನೀಡಿ, ಪಕ್ಕದ ಮನೆಯವರನ್ನೆಲ್ಲ ಕರೆದು ಹತ್ತಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ್ದು ಅವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ವಲ್ಪ ಹೊತ್ತು ಹೆಚ್ಚು ಕಡಿಮೆಯಾಗಿದ್ದರೂ ಎಲ್ಲಾ ಹತ್ತಿ ಸುಟ್ಟು, ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಆವರಿಸಿಕೊಳ್ಳುವ ಆತಂಕ ಎದುರಾಗಿತ್ತು. ಆದರೆ ಬಾಲಕಿಯ ಸಮಯಪ್ರಜ್ಞೆಯಿಂದಾಗಿ ಸಂಭವನೀಯ ಅವಘಡ ತಪ್ಪಿದೆ. ಹೀಗಾಗಿ ಮಾಹಿತಿ ನೀಡಿದ್ದಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಬಾಲಕಿ ಪ್ರಜನ್ಯಾಳಿಗೆ ಧನ್ಯವಾದ ತಿಳಿಸಿದ್ದಾರೆ.
