ಬೆಂಗಳೂರು:- ನಗರದ ಅರಮನೆ ಮೈದಾನದಲ್ಲಿ ತುಳು ಕೂಟದ ವತಿಯಿಂದ ನಡೆದ ಬೆಂಗಳೂರು ಕಂಬಳ ನೋಡಲೇ ಸಿನಿ ದಿಗ್ಗಜರೇ ಆಗಮಿಸಿದರು.
ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ. ನವೆಂಬರ್ 25ರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ನವೆಂಬರ್ 26ರ ರಾತ್ರಿ 2 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ ಎರಡೂ ದಿನಗಳಲ್ಲಿ ಅರಮನೆ ಮೈದಾನದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಕಂಬಳ ಅಭಿಮಾನಿಗಳು ನೆರೆದಿದ್ದು ಈ ಮೂಲಕ ಹೊಸ ಚರಿತ್ರೆಯನ್ನೇ ಬರೆಯಲಾಗಿದೆ.
159ರ ಜೋಡಿ ಕೋಣಗಳು ಭಾಗವಹಿಸಿದ ಈ ಮಹಾ ಕೂಟದಲ್ಲಿ ಅತ್ಯಂತ ಪ್ರತಿಷ್ಠೆಯ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಸಿ ಕೋಣಗಳು ಪ್ರಥಮ ಬಹುಮಾನ ಪಡೆದರೆ ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ. ಶ್ರೀಕಾಂತ್ ಭಟ್ ಅವರ ಕೋಣಗಳನ್ನು ಬಂಬ್ರಾಣ ಬೈಲು ವಂದಿತ್ ಶೆಟ್ಟಿ ಅವರು ಓಡಿಸಿದ್ದಾರೆ. ಈ ಕೋಣಗಳು 9.51 ಸೆಕೆಂಡ್ನಲ್ಲಿ ಓಟವನ್ನು ಮುಗಿಸಿವೆ. ಇದು ಕೂಟ ದಾಖಲೆಯಾಗಿದೆ ಮತ್ತು ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಈ ಹಿಂದೆ ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಅವರು 9.51 ಸೆಕೆಂಡ್ನಲ್ಲಿ ಓಟವನ್ನು ಮುಗಿಸಿದ್ದರು.
ಅಂತಿಮ ಫಲಿತಾಂಶ ಹೀಗಿದೆ ನೋಡಿ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 159
ಕನೆಹಲಗೆ: 07 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ
ನೇಗಿಲು ಕಿರಿಯ: 62 ಜೊತೆ
ಈ ಕೂಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದವರಿಗೆ 16 ಪವನ್ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ದ್ವಿತೀಯ ಪ್ರಶಸ್ತಿ ಗೆದ್ದವರಿಗೆ 8 ಪವನ್ ಚಿನ್ನ ಮತ್ತು 50 ಸಾವಿರ ರೂ. ಬಹುಮಾನ ನೀಡಲಾಗಿದೆ. ಮೂರನೇ ಬಹುಮಾನವಾಗಿ 4 ಪವನ್ ಚಿನ್ನ ಮತ್ತು 25 ಸಾವಿರ ರೂ. ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.