ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ, ಹೀನಾಯ ಕೆಲಸ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.
ಮೈಸೂರು ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ. ಇದನ್ನು ವೈದ್ಯರು ಕೂಡಾ ಶಾಮೀಲಾಗಿ ಮಾಡುತ್ತಿರುವುದು ಅಪರಾಧ. ಯಾವುದೇ ಸರ್ಕಾರವಿದ್ದರೂ ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂಥ ಕೆಲಸ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದನ್ನು ತಡೆಗಟ್ಟಲು ಸರ್ಕಾರ ಬದ್ಧ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು.
12ನೇ ಶತಮಾನದಲ್ಲೇ ಬಸವಣ್ಣ ಹಾಗೂ ಶರಣರು ಗಂಡು ಹೆಣ್ಣು ಭೇದಭಾವ ಅಳಿಸಿ ಹಾಕಿದ್ದರು. ಹೆಣ್ಣು ಲಕ್ಷ್ಮೀ ಇದ್ದಂಗೆ. ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಒಳ್ಳೆಯವರು. ತಂದೆ ತಾಯಂದಿರನ್ನು ಸಾಕುವವರು ಅವರೇ ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿಯೂ ಇಂಥ ಕೆಲಸ ಮಾಡಲು ಬಿಡಲ್ಲ. ಜನರಲ್ಲೂ ಜಾಗೃತಿ ಮೂಡಬೇಕಿದೆ. ಇಂಥ ಘಟನೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ. ಎಂದು ತಿಳಿಸಿದರು.