ಬೆಂಗಳೂರು:- ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಯಂತ್ರಗಳ ಸರಬರಾಜು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಲಕ್ಷ್ಮಣ್ ಗೌಡ ಬಂಧಿತ ಆರೋಪಿ ಎನ್ನಲಾಗಿದೆ. ಲಕ್ಷ್ಮಣ್ ಗೌಡ ಮಂಗಳೂರಿನಲ್ಲಿ ಆವಿಷ್ಕಾರ ಬ್ರದರ್ಸ್ ಬಯೋ ಮೆಡಿಕಲ್ ಪ್ರೈ.ಲಿ ಕಂಪನಿ ಹೊಂದಿದ್ದ. ಮೂರು ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ನೀಡಿದ್ದ. ಆಯುರ್ವೇದಿಕ್ ವೈದ್ಯ ಮಲ್ಲಿಕಾರ್ಜುನಗೆ ಸ್ಕ್ಯಾನಿಂಗ್ ಯಂತ್ರ ಕೊಟ್ಟಿದ್ದ. ಬಳಿಕ 3 ಸ್ಕ್ಯಾನಿಂಗ್ ಯಂತ್ರಗಳನ್ನ ಭ್ರೂಣ ಪತ್ತೆ ಗ್ಯಾಂಗ್ಗೆ ಮಾರಾಟ ಮಾಡಿದ್ದ. ಈ ಪೈಕಿ ಒಂದು ಸ್ಕ್ಯಾನಿಂಗ್ ಮಷಿನ್ ನನ್ನು ಸಿಐಡಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಸದ್ಯ ಪ್ರಕರಣದಲ್ಲಿ 12 ಜನರನ್ನು ಬಂಧಿಸಲಾಗಿದ್ದು, ಸಿಐಡಿ ತಂಡ ಬಹುತೇಕ ತನಿಖೆಯನ್ನು ಮುಕ್ತಾಯಗೊಳಿಸಿದೆ. ಕೆಲವೇ ದಿನಗಳಲ್ಲಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ಮಾಡಲಿದೆ. ಇತ್ತೀಚಿನ ಸಿಐಡಿ ತಂಡದ ತನಿಖೆಯ ಪ್ರಕಾರ ಭ್ರೂಣ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರಗಳ ಮೂಲ ಸಿಕ್ಕಿರಲಿಲ್ಲ. ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿದ್ದರೂ ಸಿಐಡಿಗೆ ಸ್ಕ್ಯಾನಿಂಗ್ ಯಂತ್ರಗಳ ಖರೀದಿ ಮೂಲ ಮಾತ್ರ ಪತ್ತೆಯಾಗಿರಲಿಲ್ಲ.
ಈ ಬಗ್ಗೆ ಆರೋಗ್ಯ ಇಲಾಖೆಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿರಲ್ಲಿ. ಹೀಗಾಗಿ ಸರ್ಕಾರದಿಂದ ಅನುಮತಿ ಪಡೆದು ಆರೋಗ್ಯ ಇಲಾಖೆಗೆ ವರದಿ ನೀಡಲು ಸಿದ್ದತೆ ಮಾಡಲಾಗಿತ್ತು. ಸ್ಕ್ಯಾನಿಂಗ್ ಯಂತ್ರಗಳ ಮಾರಾಟ ಹಾಗೂ ಬಳಕೆ ಅಕ್ರಮ ಕಂಡುಬಂದಿದ್ದು, ಆದರೆ ಭ್ರೂಣ ಪತ್ತೆಗೆ ಬಳಸುತ್ತಿದ್ದ ಯಂತ್ರಗಳು ತಂದಿದ್ದು ಎಲ್ಲಿ ಎನ್ನುವುದು ನಿಗೂಢವಾಗಿತ್ತು. ಆದರೆ ಸದ್ಯ ಸಿಐಡಿ ಪೊಲೀಸರು ಸ್ಕ್ಯಾನಿಂಗ್ ಯಂತ್ರಗಳನ್ನ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಬಳಿಯ ಎಸ್ಪಿಜಿ ಆಸ್ಪತ್ರೆಯಲ್ಲಿ ಸದ್ದಿದ್ದಲ್ಲದೆ ಭ್ರೂಣಹತ್ಯೆ ನಡೀತಿತ್ತು. ಡಿಸೆಂಬರ್ 13 ರಂದು ಅಬಾರ್ಷನ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಆರೋಗ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಇದೇ ಆಸ್ಪತ್ರೆಯಲ್ಲಿ ನಡೀತಿದ್ದ ಕರಾಳ ದಂಧೆ ಈಗ ಬಟಾಬಯಲಾಗಿತ್ತು.