ಟೀಮ್ ಇಂಡಿಯಾದ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆಯು ವೇಗದ ಬೌಲಿಂಗ್ ವಿಭಾಗದಲ್ಲಿ ಬಹುತೇಕ ಹೊಸ ಮುಖಗಳನ್ನೇ ಹೊಂದಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ ಎಂದು ಜೇಮ್ಸ್ ಅಂಡರ್ಸನ್ ಹೇಳಿದ್ದಾರೆ.
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನುಭವಿ ವೇಗಿ ಜೇಮ್ಸ್ ಅಂಡರ್ಸನ್, ಭಾರತ ಪಿಚ್ ಗಳಲ್ಲಿ ಬೌಲ್ ಮಾಡುವುದು ಕಠಿಣ ಸಂಗತಿ ಎಂದು ಹೇಳಿದ್ದಾರೆ.
“ನಾನು ಜನರಿಗೆ ಉತ್ತಮ ಸಂದೇಶ ರವಾನಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ತಂಡದಲ್ಲಿ ಭಾರತದ ಪಿಚ್ ಗಳಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಬೌಲರ್ ಗಳೇ ಹೆಚ್ಚಾಗಿದ್ದಾರೆ. ಆದ್ದರಿಂದ ಅವರಿಗೆ ಇದೊಂದು ಕಠಿಣ ಸವಾಲಾಗಿದೆ. ನನ್ನ ಕೈಲಾದಷ್ಟು ಸಲಹೆ ಅವರಿಗೆ ನೀಡಲು ಬಯಸುತ್ತೇನೆ” ಎಂದು ಇಂಗ್ಲೆಂಡ್ ಅನುಭವಿ ವೇಗಿ ಹೇಳಿದ್ದಾರೆ.
“ನಮ್ಮ ತಂಡದಲ್ಲಿ ಕೇವಲ 4 ಮಂದಿ ವೇಗದ ಬೌಲರ್ ಗಳು ಸ್ಥಾನ ಪಡೆದಿದ್ದಾರೆ. ಆದ್ದರಿಂದ ಅವರಿಂದ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದೊಂದು ನಿಜಕ್ಕೂ ವಿಭಿನ್ನ ಪಾತ್ರವಾಗಿದೆ. ಇಂಗ್ಲೆಂಡ್ ಪಿಚ್ ಗಳಲ್ಲಿ ತೋರಿದ ಬೌಲಿಂಗ್ ಪ್ರದರ್ಶನವನ್ನು ಭಾರತದ ಪಿಚ್ ಗಳಲ್ಲಿ ತೋರಲು ಸಾಧ್ಯವಾಗುವುದಿಲ್ಲ. ಆದರೂ ಉತ್ತಮ ಪ್ರದರ್ಶನ ತೋರುವುದರತ್ತ ಗಮನ ಹರಿಸಬೇಕು” ಎಂದು ಜೇಮ್ಸ್ ಅಂಡರ್ಸನ್ ಹೇಳಿದ್ದಾರೆ.