ಸರಿಸುಮಾರು 10,000 ವರ್ಷಗಳ ಹಿಂದೆ[೨೨] ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. ನೀರಾವರಿ, ಬೆಳೆಗಳ ಸರದಿ, ರಸಗೊಬ್ಬರಗಳು, ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳು ಬಹಳ ಹಿಂದೆಯೇ ಅಭಿವೃದ್ಧಿಯಾದರೂ, ಕಳೆದ ಶತಮಾನದಲ್ಲಷ್ಟೇ ಅತೀವವಾದ ಪ್ರಗತಿ ಸಾಧಿಸಲು ಅವಕ್ಕೆ ಸಾಧ್ಯವಾಯಿತು. ವಿಶ್ವಾದ್ಯಂತದ ಸಮಾಜೋ-ಆರ್ಥಿಕ ಬದಲಾವಣೆಯಲ್ಲಿ ವ್ಯಾವಸಾಯಿಕ ಪ್ರಗತಿಯು ಒಂದು ನಿರ್ಣಾಯಕ ಅಂಶವಾಗಿಯೇ ಬೆಳೆದುಕೊಂಡು ಬಂದಿದ್ದರಿಂದಾಗಿ, ಕೃಷಿಯ ಇತಿಹಾಸವು ಮಾನವ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ಬೇಟೆಗಾರ-ಸಂಗ್ರಹಕಾರ ಸಂಸ್ಕೃತಿಗಳಲ್ಲಿ ಅಪರೂಪವಾಗಿ ಕಾಣಿಸುವ ಸಂಪತ್ತು-ಕೇಂದ್ರೀಕರಣ ಮತ್ತು ಸೈನಿಕ ಪ್ರವೃತ್ತಿಯ ಅಥವಾ ಅತಿಯಾದ ಕಟ್ಟುನಿಟ್ಟಿನ ತಜ್ಞತೆಗಳು, ಕೃಷಿಯನ್ನು ಕಾರ್ಯರೂಪಕ್ಕೆ ತಂದಿರುವ ಅಥವಾ ಅಭ್ಯಾಸ ಮಾಡುವ ಸಮಾಜಗಳಲ್ಲಿ ಸವೇಸಾಮಾನ್ಯವಾಗಿವೆ. ಆದ್ದರಿಂದ, ಬೃಹತ್-ಸಾಹಿತ್ಯ ಹಾಗೂ ಸ್ಮಾರಕಗಳ ವಾಸ್ತುಶೈಲಿಗಳಂಥ ಕಲೆಗಳು, ಕ್ರೋಡೀಕೃತ ಕಾನೂನು ವ್ಯವಸ್ಥೆಗಳೂ ಸಹ ಇಂಥ ಸಮಾಜಗಳಲ್ಲಿ ಸರ್ವೇಸಾಮಾನ್ಯವಾಗಿವೆ. ತಮ್ಮದೇ ಕುಟುಂಬದ ಅಗತ್ಯಗಳನ್ನು ಪೂರೈಸಿ ಮಿಗುವಷ್ಟು ಆಹಾರ ಪದಾರ್ಥವನ್ನು ಉತ್ಪಾದಿಸಬಲ್ಲಷ್ಟು ರೈತರು ಸಮರ್ಥರಾದಾಗ, ಆಹಾರ ಸಂಗ್ರಹಣೆಯ ಕೆಲಸವನ್ನೂ ಮೀರಿದ ಇತರ ಯೋಜನೆಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಅವರ ಸಮುದಾಯದಲ್ಲಿನ ಇತರರಿಗೆ ಮುಕ್ತ ಅವಕಾಶ ನೀಡಲಾಯಿತು. ಕೃಷಿಯ ಅಭಿವೃದ್ಧಿಯಿಂದಾಗಿಯೇ ನಾಗರಿಕತೆಗಳು ಕಾರ್ಯಸಾಧ್ಯವಾದವು ಎಂದು ಇತಿಹಾಸಕಾರರು ಹಾಗೂ ಮಾನವಶಾಸ್ತ್ರಜ್ಞರು ಬಹುಕಾಲದಿಂದ ವಾದಿಸಿದ್ದಾರೆ.
