2023-24ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ (MSP) ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 2,183 ರೂ. ಮತ್ತು ರಾಗಿಗೆ ಪ್ರತಿ ಕ್ವಿಂಟಾಲ್ಗೆ 3846 ರೂಪಾಯಿ ನಿಗದಿ ಮಾಡಲಾಗಿದೆ.
ಡಿ.1ರಂದು ಆರಂಭವಾಗಬೇಕಿದ್ದ ರಾಗಿ ಖರೀದಿ ನೋಂದಣಿ ತಾಂತ್ರಿಕ ಸಮಸ್ಯೆಯಿಂದ 15 ದಿನ ತಡವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖರೀದಿ ಕೇಂದ್ರಗಳನ್ನು ಆರಂಭಿಸಿ ಅಗತ್ಯ ಸೌಲಭ್ಯ ಒದಗಿಸಲು ಸೂಚನೆ ನೀಡಿದ್ದರು. ಆದರೆ ನೋಂದಣಿಗೆ ನಿಗದಿಪಡಿಸಿದ್ದ ದಿನ ಕಳೆದು 15 ದಿನವಾದರೂ ನೋಂದಣಿ ಆರಂಭವಾಗದ ಹಿನ್ನೆಲೆ ರೈತರು ನಿತ್ಯ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಬಗೆಹರಿದು ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ 5 ಖರೀದಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗಿದ್ದು, ರೈತರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ವಹಿಸಬೇಕಿದೆ.
ಈ ಬಾರಿ ಮಳೆ ರೈತರ ಬೆಳೆಗಳಿಗೆ ಕೈಕೊಟ್ಟಿದೆ. ಬಹುತೇಕ ಕಡೆಗಳಲ್ಲಿರಾಗಿ ಬಿತ್ತನೆಯೇ ಆಗಿಲ್ಲ. ಕೆಲವೆಡೆ ಮಾತ್ರ ರಾಗಿ ಬೆಳೆ ರೈತರ ಕೈಸೇರುವಂತೆ ಮಾಡಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿರಾಗಿ ಕಟಾವು ಕಾರ್ಯ ಪೂರ್ಣಗೊಂಡಿದ್ದು, ಚೀಲಗಳಲ್ಲಿರಾಗಿಯನ್ನು ತುಂಬಿ ಶೇಖರಿಸಿಟ್ಟಿದ್ದಾರೆ. ಜತೆಗೆU ರೈತರು ಖರೀದಿ ಕೇಂದ್ರಗಳ ನೋಂದಣಿಗೆ ಕಾಯುತ್ತಿದ್ದರು. ಆದರೆ ಕಳೆದ 15 ದಿನಗಳಿಂದ ರೈತರು ನೋಂದಣಿಗಾಗಿ ಕಾಯುತ್ತಿದ್ದು, ಅನೇಕರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದರು. ಇದೀಗ ನೋಂದಣಿ ಆರಂಭವಾಗಿದ್ದು, ರೈತರಿಗೆ ಕೊಂಚ ಸಮಾಧಾನ ತಂದಿದೆ.
ಕಳೆದ ಬಾರಿಗೆ ಹೋಲಿಸಿದರೆ ರಾಗಿ ಬೆಂಬಲ ಬೆಲೆಯನ್ನು ಈ ಬಾರಿ ಹೆಚ್ಚಿಸಲಾಗಿದೆ. ಕಳೆದ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3500 ರೂ. ನಿಗದಿಪಡಿಸಲಾಗಿತ್ತು. ಈ ಬಾರಿ 3846 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ರೈತರು ಬೆಳೆದ ರಾಗಿಗೆ ಉತ್ತಮ ದರ ಸಿಗುವ ನಿರೀಕ್ಷೆ ಇತ್ತು. ಡಿ.1ರಿಂದ ರಾಗಿ ಖರೀದಿ ನೋಂದಣಿ ಆರಂಭವಾಗಿ ತದ ನಂತರ ಜ.1ರಿಂದ ಮಾ.31ರವರೆಗೂ ರಾಗಿ ಖರೀದಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ನೋಂದಣಿ ತಡವಾಗಿ ಆರಂಭವಾಗಿದೆ. ಆದಷ್ಟು ಬೇಗ ನೋಂದಣಿ ಮುಗಿಸಿ ಖರೀದಿ ಕಾರ್ಯ ನಡೆಬೇಕಿದೆ ಎಂದು ರೈತರು ಮನವಿ ಮಾಡಿದ್ದಾರೆ.