ಹುಬ್ಬಳ್ಳಿ: ಭಾರತದ ಬೆನ್ನೆಲುಬು ಆಗಿರುವ ರೈತರು ಹೆಣ್ಣು ಸಿಗದೆ ಪರದಾಡುತ್ತಿದ್ದಾರೆ. ರೈತ ಎಂಬ ಕಾರಣಕ್ಕೆ ಹೆಣ್ಣು ಹೆತ್ತವರು ಮಗಳನ್ನು ಅವರಿಗೆ ಮದುವೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಈ ತೊಂದರೆ ದಿನೇ ದಿನೇ ಹೆಚ್ಚಾಗಲಾರಂಭಿಸಿದ್ದು, ಕೃಷಿಕ ವರ್ಗವನ್ನು ಕಂಗಾಲಾಗುವಂತೆ ಮಾಡಿದೆ.
ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿರೋ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸಬೇಕೆಂದು ಕುಂದಗೋಳ ತಹಶೀಲ್ದಾರ್ಗೆ ಹೊಸಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದಾರೆ.

ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮಸ್ಥರಿಂದ ವಿಭಿನ್ನ ಮನವಿ ಸಲ್ಲಿಕೆಯಾಗಿದ್ದು, ಚರ್ಚೆಗೆ ಕಾರಣವಾಗಿದೆ. ತಹಶೀಲ್ದಾರ್ ಗ್ರಾಮ ವಾಸ್ತವ್ಯ ವೇಳೆ ಗ್ರಾಮಸ್ಥರು ವಿಭಿನ್ನ ಮನವಿ ಸಲ್ಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡೋಕೆ ಜನರು ಹಿಂದೇಟು ಹಾಕ್ತಿದಾರೆ. ನೌಕರಿ ಇದ್ದರೆ ಮಾತ್ರ ಹೆಣ್ಣು ಕೊಡ್ತೀವಿ ಅಂತಾರೆ. ಹೀಗಾಗಿ ಸರ್ಕಾರ ಜನಜಾಗೃತಿ ಮಾಡಬೇಕೆಂದು ಹೊಸಳ್ಳಿ ಗ್ರಾಮಸ್ಥರು ಕುಂದಗೋಳ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ರೈತ ದೇಶದ ಬೆನ್ನೆಲಬು ಅಂತಾರೆ, ಅನ್ನ ನೀಡಲು ರೈತ ಬೇಕು. ಹೀಗಾಗಿ ನಾವು ಕೃಷಿ ಅವಲಂಬಿಸಿದ್ದೇವೆ. ಆದ್ರೆ ನಮ್ಮ ಮಕ್ಕಳಿಗೆ ಎಲ್ಲಿಯೂ ಹೆಣ್ಣು ಸಿಗ್ತಿಲ್ಲ. ಸರ್ಕಾರ ರೈತರ ಕುರಿತು ಮನವರಿಕೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರೋದಾಗಿ ಕುಂದಗೋಳ ತಹಶೀಲ್ದಾರರು ಭರವಸೆ ನೀಡಿದ್ದಾರೆ.
