ನಾವು ತಿನ್ನುವ ಆಹಾರ ರುಚಿಯಾಗಿರಬೇಕು ಎಂದರೆ ಅದರಲ್ಲಿ ಇರಬೇಕಾದ ಎಲ್ಲವೂ ಹೆಚ್ಚು ಕಡಿಮೆ ಆಗದಂತೆ ಸಮತೋಲನ ವಾಗಿರಬೇಕು. ಏಕೆಂದರೆ ಅವುಗಳಲ್ಲಿ ಯಾವುದು ಹೆಚ್ಚಾದರೂ ಅಥವಾ ಕಡಿಮೆಯಾದರೂ ಅಡುಗೆ ಹಾಳಾಗುತ್ತದೆ. ಇಂದು ನಾವು ನಮ್ಮ ಆಹಾರದಲ್ಲಿ ಒಂದು ಮುಖ್ಯ ಉತ್ಪನ್ನವಾಗಿ ಬಳಕೆ ಆಗುವ ಆಹಾರ ಪದಾರ್ಥದ ಬಗ್ಗೆ ಮಾತನಾಡುತ್ತಿದ್ದೇವೆ. ಅದೇ ಉಪ್ಪು. ಆಹಾರದ ರುಚಿಗಾಗಿ ಬಳಸುವ ಉಪ್ಪು ಹೆಚ್ಚಾದರೆ ರುಚಿ ಕೂಡ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು.
ಏಕೆಂದರೆ ನಿಮಗೆ ಅನುಭವವಾಗಿರುವ ಹಾಗೆ ಉಪ್ಪು ಹೆಚ್ಚಾದ ಯಾವುದೇ ಆಹಾರವನ್ನು ಬಾಯಲ್ಲಿ ಕೂಡ ಇಡಲು ಸಾಧ್ಯವಿಲ್ಲ. ಒಂದು ವೇಳೆ ತಿಂದರೂ ಕೂಡ ಅದರಿಂದ ಮುಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಕೆಲವರಿಗೆ ತಾತ್ಕಾಲಿಕ ವಾಗಿ ಆರೋಗ್ಯದ ತೊಂದರೆಗಳು ಎದುರಾದರೆ ಇನ್ನು ಕೆಲವರಿಗೆ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ.
ಊತ:
ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ನೀರು ವಿಪರೀತವಾಗಿ ಶೇಖರಣೆಯಾಗುತ್ತದೆ.ಇದರಿಂದಾಗಿ . ಕೈ, ಕಾಲು ಮತ್ತು ಕಣಕಾಲುಗಳಲ್ಲಿ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿಮ್ಮನ್ನು ಕಾಡಬಾರದೆಂದರೆ, ಉಪ್ಪನ್ನು ಮಿತಪ್ರಮಾಣದಲ್ಲಿ ಸೇವಿಸಿ.
ಕಿಡ್ನಿ ಸಮಸ್ಯೆ:
ಅತಿಯಾದ ಉಪ್ಪು ಸೇವನೆಯು ಕಿಡ್ನಿಯನ್ನು ಹಾನಿಗೊಳಿಸಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಉಪ್ಪಿನ ಅತಿಯಾದ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ವವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ರಕ್ತದೊತ್ತಡ:
ನಿಮ್ಮ ಆರೋಗ್ಯಕ್ಕೆ ಉಪ್ಪು ಬಹಳ ಮುಖ್ಯ. ಆದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ.
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸುವುದರಿಂದ ವ್ಯಕ್ತಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಆಹಾರದಲ್ಲಿ ಉಪ್ಪನ್ನು ಮಿತ ಪ್ರಮಾಣದಲ್ಲಿ ಬಳಸಬೇಕೆಂದು ಸಲಹೆ ನೀಡುತ್ತಾರೆ.
ಹೃದಯದ ಆರೋಗ್ಯ:
ಅತಿಯಾದ ಉಪ್ಪು ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ. ನೀವು ದಿನಕ್ಕೆ ಐದು ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಿದರೆ, ಅದು ನಿಮ್ಮ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿರ್ಜಲೀಕರಣ:
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ, ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಲು ಆಹಾರದಲ್ಲಿ ಮಿತ ಪ್ರಮಾಣದ ಉಪ್ಪನ್ನು ಸೇರಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.