ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಇದೇ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆಗೆ ಭರ್ಜರಿ ತಯಾರಿ ಶುರುವಾಗಿದ್ದು ಮಧು, ವರರ ಮನೆಯಲ್ಲಿ ಮದುವೆ ಮುನ್ನ ಕಾರ್ಯಕ್ರಮಗಳು ಆರಂಭವಾಗಿದೆ. ಈ ಮಧ್ಯೆ ಧನಂಜಯ್ ಹುಟ್ಟೂರಾದ ಅರಸಿಕೆರೆಯ ಕಾಳೇನ ಹಳ್ಳಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ.
ಡಾಲಿಯ ಹುಟ್ಟೂರಾದ ಕಾಳೇನಹಟ್ಟಿಯ ಸರ್ಕಾರಿ ಶಾಲೆ ದೀನ ಸ್ಥಿತಿಯಲ್ಲಿತ್ತು. ತಾರಸಿ ಮುರಿದಿತ್ತು, ನೆಲದ ಹಾಸೆಲ್ಲ ಒಡೆದು ಹೋಗಿತ್ತು. ಮಕ್ಕಳಿಗೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ನೋಡಿದ್ದ ಡಾಲಿ ಶಾಲೆಗೆ ಮರು ಜೀವ ತುಂಬುವ ಕಾರ್ಯ ಮಾಡಿದ್ದಾರೆ.
ತಮ್ಮೂರಿಗೆ ಸರ್ಕಾರಿ ಶಾಲೆಗೆ ಬಣ್ಣ ಹೊಡೆಸಿ, ಒಡೆದಿದ್ದ ತಾರಸಿಯನ್ನು ಸರಿ ಮಾಡಿಸಿ, ನೆಲ ಹಾಸನ್ನು ಮತ್ತೊಮ್ಮೆ ಹಾಕಿಸಿ. ಶುದ್ಧ ಕುಡಿಯುವ ನೀರಿಗೆ ವಾಟರ್ ಫಿಲ್ಟರ್ಗಳನ್ನು ಅಳವಡಿಸಿ ಕೊಟ್ಟಿದ್ದಾರೆ.
ಮದುವೆಗೆ ಮುಂಚೆ ಈ ಸಾಮಾಜಿಕ ಕಾರ್ಯಕ್ಕೆ ಡಾಲಿ ಕೈ ಹಾಕಿದ್ದರು. ಅದರಂತೆ ಇಂದು (ಫೆಬ್ರವರಿ 13) ಡಾಲಿ ಧನಂಜಯ ತಮ್ಮೂರಿನ ನವೀಕೃತ ಶಾಲೆಗೆ ಹೋಗಿ ಎಲ್ಲವನ್ನೂ ಪರಿಶೀಲಿಸಿದ್ದಲ್ಲದೆ, ಶಾಲೆಯ ಮಕ್ಕಳೊಡನೆ ಕೆಲ ಹೊತ್ತು ಮಾತನಾಡಿದ್ದಾರೆ.
ಧನಂಜಯ್ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೆಂಡ ತುಳಿದಿದ್ದಾರೆ. ಅದಕ್ಕೂ ಮುನ್ನ ದೇವಸ್ಥಾನನಕ್ಕೆ ಕುಟುಂಬಸ್ಥರು ಹಾಗೂ ಊರಿಗೂ ಮಧುಮಗನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಬಳಿಕ ಡಾಲಿ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದರು. ಈ ವೇಳೆ ಧನಂಜಯ್ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.